ಯಾದಗಿರಿ | ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೊಲೀಸ್ ಇಲಾಖೆ ಪಾತ್ರ ಬಹುಮುಖ್ಯ : ವೆಂಕಣ್ಣ ಶಹಾಪುರಕರ್

ಯಾದಗಿರಿ : ಸಮಾಜದ ನೆಮ್ಮದಿ ಕಾಪಾಡಿ, ಅಪರಾಧ ಮುಕ್ತ ಸಮಾಜ ನಿರ್ಮಿಸುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ ಎಂದು ನಿವೃತ್ತ ಪಿಎಸ್ ಐ ವೆಂಕಣ್ಣ ಶಹಾಪುರಕರ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ಬುಧವಾರ ಪೊಲೀಸ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕವಾಯತು ಪರಿವೀಕ್ಷಣೆ, ಪಥ ಸಂಚಲನ ಗೌರವ ವಂದನೆ ಸ್ವಿಕರಿಸಿ ಅವರು ಮಾತನಾಡಿದರು.
ಇಲಾಖೆಯಲ್ಲಿ ಪ್ರತಿದಿನ ಕರ್ತವ್ಯಗಳಲ್ಲಿ ಸವಾಲುಗಳಿರುತ್ತವೆ. ಇಂದಿನ ದಿನಗಳಲ್ಲಿ ಪ್ರಾಮಾಣಿಕತೆ ಕಾಪಾಡಿಕೊಂಡು ಇಲಾಖೆಯ ಗೌರವವನ್ನು ಕಾಪಾಡಿಕೊಂಡು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರತಿಯೊಂದು ಹಂತದಲ್ಲೂ ಪೊಲೀಸ್ ವ್ಯವಸ್ಥೆ ಅವಶ್ಯಕವಾಗಿದೆ. ಪೊಲೀಸ್ ಇಲಾಖೆ ಸಮಾಜದ ಅವಿಭಾಜ್ಯ ಅಂಗವಾಗಿದೆ. ತಾವು ಸೇವೆಗೆ ಸೇರಿದ ಆ ದಿನಗಳಿಗೆ ಹೊಲಿಸಿದರೆ ಇಲಾಖೆ ಎಲ್ಲ ರೀತಿಯಿಂದಲ್ಲೂ ಸಾಕಷ್ಟು ಸುಧಾರಣೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್, ರಾಜ್ಯ ಪೊಲೀಸ್ ಕಾಯ್ದೆಯು 1965 ಏ.2 ರಂದು ಜಾರಿಗೆ ಬಂದಿದ್ದು, ಅಲ್ಲಿಂದ ಪ್ರತಿವರ್ಷವೂ ಈ ದಿನ ರಾಜ್ಯದ ಎಲ್ಲಡೆ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಇದೇ ವೇಳೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿಸೇವೆ ಸಲ್ಲಿಸಿ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಚಂದ್ರಶೇಖರ್, ಹಸನ್ ಪಟೇಲ್, ತಿಪ್ಪಣ್ಣ, ಕಲ್ಯಾಣಿ, ನಿಂಗಣ್ಣ ಮತ್ತು ಬಸವರಾಜ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಅರುಣಕುಮಾರ, ಮಹಿಳಾ ಅಧಿಕಾರಿ ಶ್ರೀದೇವಿ ಬಿರಾದಾರ, ಜಾವೇದ್ ಇನಾಂದಾರ್, ಪಿಎಸ್ಐ ಮಂಜೇಗೌಡ, ಭಾವಕ್ಯತೆ ಸಮಿತಿ ಪ್ರಮುಖರಾದ ವಿಶ್ವನಾಥ ಶಿರವಾಳ್, ಮರೆಪ್ಪ ಚಟ್ಟರಕಿ, ಬಸವರಾಜ, ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿ ಇದ್ದರು.
ಡಿವೈಎಸ್ಪಿ ಭರತ್ ಕುಮಾರ ಸ್ವಾಗತಿಸಿದರು, ಡಿವೈಎಸ್ ಪಿ ನಾಗರಾಜ ವಂದಿಸಿದರು, ಮುಖ್ಯಪೇದೆ ಸಂತೋಷ ನಿರೂಪಿಸಿದರು. ವಿವಿಧ ಐದು ತಂಡಗಳಿಂದ ಪಥ ಸಂಚಲನ ನಡೆಯಿತು.