ಯಾದಗಿರಿ | ವಲಯ ಅರಣ್ಯಾಧಿಕಾರಿಯನ್ನು ಅಮಾನತುಗೊಳಿಸಲು ಆಗ್ರಹಿಸಿ ಪ್ರತಿಭಟನೆ

ಸುರಪುರ : ನಗರದ ಕೆನರಾ ಬ್ಯಾಂಕ್ ಶಾಖೆ ಮುಂದಿನ ಸರ್ವೇ ನಂಬರ್ 23/1 ರಲ್ಲಿ ಅಕ್ರಮವಾಗಿ ಜೆಸಿಬಿ ಮತ್ತು ಹಿಟಾಚಿ ಬಳಸಿ ಒಂದು ತಿಂಗಳಿಂದ ನಿರಂತರವಾಗಿ ಮಣ್ಣು ಅಗೆಯಲಾಗುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವ ವಲಯ ಅರಣ್ಯಾಧಿಕಾರಿಯನ್ನು ಅಮಾವತುಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಆರೋಪಿಸಿದ್ದಾರೆ.
ನಗರದ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ನಿರಂತರವಾಗಿ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದ್ದರೂ, ವಲಯ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ನೋಡಿದಾಗ ಅಧಿಕಾರಿಗಳು ಇದರಲ್ಲಿ ಶಾಮಿಲಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳಬೇಕು ಮತ್ತು ನೈಸರ್ಗಿಕ ಸಂಪತ್ತು ಅಕ್ರಮ ಸಾಗಾಟ ಮಾಡುವುದನ್ನು ತಡೆಯಬೇಕು, ಇಲ್ಲವಾದಲ್ಲಿ ನಮ್ಮೆಲ್ಲ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಡಿಎಸ್‌ಎಸ್ ಭೀಮಘರ್ಜನೆ ಸಂಘಟನೆ ರಾಜ್ಯ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ಡಿಎಸ್‌ಎಸ್ ಭೀಮವಾದ ಸಂಘಟನೆ ರಾಜ್ಯ ಸಂ.ಸಂಚಾಲಕ ಭೀಮರಾಯ ಸಿಂದಗೇರಿ, ಮೂಲನಿವಾಸಿ ಅಂಬೇಡ್ಕರ್ ಸಂಘದ ರಾಜ್ಯ ಸಂ.ಸಂಚಾಲಕ ರಾಹುಲ್ ಹುಲಿಮನಿ, ಮುಖಂಡರಾದ ಅಶೋಕ ನಾಯ್ಕಲ್, ಶರಣಪ್ಪ ತಳವಾರಗೇರಾ, ಚಂದಪ್ಪ ಪಂಚಮ್, ಅವಿನಾಶ ಹೊಸ್ಮನಿ ಚಿಕ್ಕನಹಳ್ಳಿ,ನಾಗರಾಜ ಬೇವಿನಾಳ, ಬನ್ನಪ್ಪ ಕೋನ್ಹಾಳ, ಮಡಿವಾಳ ಎಂಟಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.