ಯಾದಗಿರಿ | ಡಿ.29ರಂದು ಗೆಜೆಟೆಡ್ ಪ್ರೊಬೇಷನರ್ ಹುದ್ದೆ ನೇಮಕಾತಿಗೆ ಪರೀಕ್ಷೆ

Update: 2024-12-26 12:47 GMT

ಯಾದಗಿರಿ : ಕರ್ನಾಟಕ ಲೋಕಸೇವಾ ಆಯೋಗದಿಂದ ಇದೇ ಡಿ.29 ರಂದು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ಗುಂಪಿನ 384 ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಜಿಲ್ಲೆಯಲ್ಲಿ ನಕಲು ಮುಕ್ತ ಮತ್ತು ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ. ಬಿ ಅವರು ಸೂಚನೆ ನೀಡಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಯಾದಗಿರಿ ನಗರದ 15 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, 4,561 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷೆ ಸುಲಿತವಾಗಿ ನಡೆಯುವಂತೆ 15 ಕೇಂದ್ರಗಳಿಗೆ ಮೇಲ್ವಚಾರಕರು, ನಿರೀಕ್ಷಣಾಧಿಕಾರಿಗಳು, ಮಾರ್ಗಾಧಿಕಾರಿಗಳು ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ. ಪ್ರಶ್ನೆ ಪತ್ರಿಕೆ ಸರಿಯಾದ ಸಮಯಕ್ಕೆ ಕೇಂದ್ರಕ್ಕೆ ತಲುಪುವಂತೆ ಮತ್ತು ಅಭ್ಯರ್ಥಿಗಳಿಗೆ ವಿತರಣೆಯಾಗುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಪರೀಕ್ಷೆ ಮುನ್ನ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್, ಕುಡಿಯುವ ನೀರು, ಶೌಚಾಲಯ, ಗೋಡೆ ಗಡಿಯಾರ, ಗಾಳಿ ಬೆಳಕಿನ ವ್ಯವಸ್ಥೆ ಸೇರಿದಂತೆ ಆಯೋಗದ ಮಾರ್ಗಸೂಚಿ ಅನ್ವಯ ಸಕಲ ಮೂಲಸೌಕರ್ಯ ಕಲ್ಪಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಬೇಕೆಂದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಅಂದು ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ಪ್ರದೇಶದಲ್ಲಿ ಎಲ್ಲ ಝರಾಕ್ಸ್ ಅಂಗಡಿ, ಪುಸ್ತಕ ಮಳಿಗೆ ಬಂದ್ ಮಾಡಲು ಆದೇಶಿಸಿದೆ ಎಂದರು.

ಫ್ರಿಸ್ಕಿಂಗ್ ಸರಿಯಾಗಿ ಮಾಡಿ :

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪುರುಷ ಮತ್ತು ಮಹಿಳಾ ಪೊಲೀಸ್ ಪೇದೆಯನ್ನು ಪ್ರವೇಶ ದ್ವಾರದಲ್ಲಿ ನಿಯೋಜಿಸಿ ಕಟ್ಟುನಿಟ್ಟಿನ ಫ್ರಿಸ್ಕಿಂಗ್ ಮಾಡಬೇಕು.

ಪರೀಕ್ಷಾ ಕೇಂದ್ರಗಳಿಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೆ ಒಳಪಡಿಸಬೇಕು. ಎಲೆಕ್ಟ್ರಾನಿಕ್ ಡಿವೈಸ್, ಮೈಕ್ರೋಫೋನ್, ಮೈಕ್ರೋ ಚಿಪ್ ಸೇರಿ ಇನ್ನಿತರ ಸೂಕ್ಷ್ಮ ಉಪಕರಣಗಳನ್ನು ಅಳವಡಿಸಿಕೊಂಡಿಲ್ಲದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ವಿಶೇಷವಾಗಿ ಪರೀಕ್ಷಾ ಕೇಂದ್ರ ಸುತ್ತ ಪೊಲೀಸ್ ಬಂದೋಬಸ್ತ್ ಇರುವಂತೆ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಡಿ.ಡಿ.ಪಿ.ಐ ಚೆನ್ನಬಸಪ್ಪ ಮುಧೋಳ, ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ, ಸಿಪಿಐ ಶ್ರೀದೇವಿ, ನೋಡಲ್ ಅಧಿಕಾರಿ ಬಸವನಗೌಡ ಆಲದಾಳ ಸೇರಿದಂತೆ ಇತರೆ ಅಧಿಕಾರಿಗಳಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News