ಯಾದಗಿರಿ | ಬಳಿಚಕ್ರ ಗ್ರಾಮಕ್ಕೆ ಕೇಂದ್ರ ಸಚಿವರ ಭೇಟಿ, ಮಕ್ಕಳೊಂದಿಗೆ ಸಂವಾದ

Update: 2024-12-26 14:06 GMT

ಯಾದಗಿರಿ : ದೇಶದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ ಮತ್ತು ಬ್ಲಾಕ್‌ಗಳನ್ನು ಸುಸ್ಥಿರ ಅಭಿವೃದ್ದಿಪಡಿಸಿ, ಹಿಂದುಳಿವಿಕೆ ಹೋಗಲಾಡಿಸುವುದೇ ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್‌ ಕುಮಾರ ಹೇಳಿದರು.

ಗುರುವಾರ ಯಾದಗಿರಿ ತಾಲ್ಲೂಕಿನ ಬಳಿಚಿಕ್ರ ಗ್ರಾಮಕ್ಕೆ ಭೇಟಿ ನೀಡಿ, ಇಲ್ಲಿನ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಮೂಲಸೌಕರ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕೌಶಲ್ಯ ಕ್ಷೇತ್ರದಲ್ಲಿ ತೀರಾ ಹಿಂದುಳಿದ ದೇಶದ 112 ಮಹತ್ವಾಕಾಂಕ್ಷೆ ಜಿಲ್ಲೆ ಮತ್ತು 500 ತಾಲ್ಲೂಕುಗಳನ್ನು ಬ್ಲಾಕ್ ಎಂದು ವಿಂಗಡಿಸಿ ಇಲ್ಲಿ ರಾಜ್ಯ-ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ತರುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಸಂವಾದದ ವೇಳೆ ಶಾಲಾ ಮಕ್ಕಳು ಮಾತನಾಡಿ, ತಮ್ಮ ಶಾಲೆಗೆ ಆರ್.ಓ.ಪ್ಲ್ಯಾಂಟ್ ಬೇಕು, ಖಾಯಂ ಶಿಕ್ಷಕರ ಕೊರತೆ ಇದೆ, ಸಾಂಸ್ಕೃತಿಕ ವೇದಿಕೆ ದೊಡ್ಡದು ಮಾಡಬೇಕು, ನಾಲ್ಕು ಕೊಠಡಿಗಳು ಮಳೆಗೆ ಸೋರುತ್ತಿದ್ದು, ದುರಸ್ತಿ ಮಾಡಬೇಕು, ಕಂಪ್ಯೂಟರ್ ಬೇಕು, ಎಸೆಸೆಲ್ಸಿ ಸೆಂಟರ್ ಇರುವುದರಿಂದ ಎರಡ್ಮೂರು ಕೊಠಡಿ ಹೊಸದಾಗಿ ನಿರ್ಮಿಸಬೇಕು ಎಂಬಿತ್ಯಾದಿ ಬೇಡಿಕೆ ಮುಂದಿಟ್ಟರು. ನಂತರ ಸಾರ್ವಜನಿಕರು ಸಹ ಶಾಲೆಗೆ ಕಂಪೌಂಡ್, ಗ್ರಾಮದಲ್ಲಿ ರಸ್ತೆ, ಚರಂಡಿ, ಆಸ್ಪತ್ರೆ ಸಿಬ್ಬಂದಿ ಸಮಸ್ಯೆ ಬಗ್ಗೆ ಸಚಿವರ ಬಳಿ ಹೇಳಿಕೊಂಡರು.

ನಂತರ ಸಚಿವ ಬಂಡಿ ಸಂಜಯ್ ಕುಮಾರ್ ಮಾತನಾಡಿ, ಕೂಡಲೆ ಶಾಲಾ ಕೊಠಡಿ ದುರಸ್ತಿ ಕಾರ್ಯ ಮಾಡಿಸಬೇಕು. ಮುಂದಿನ ಮಾರ್ಚ್ ನಲ್ಲಿ ಮತ್ತೆ ಭೇಟಿ ನೀಡುವೆ ಅಷ್ಟರೊಳಗೆ ಕೆಲಸ ಮುಗಿಸಬೇಕೆಂದ ಅವರು, ಶಾಲೆಯ ಇನ್ನಿತರ ಸಮಸ್ಯೆಗಳನ್ಬು ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.

ಮಕ್ಕಳು ಹೇಳಿಕೊಂಡ ಸಮಸ್ಯೆಗಳಿಗೆ ಶಾಸಕ ಶರಣಗೌಡ ಕಂದಕೂರ ಅವರು ಉತ್ತರಿಸುತ್ತಾ, ಅಕ್ಷರ ಆವಿಷ್ಕಾರ ಯೋಜನೆಯಡಿ ಪ್ರಸಕ್ತ ವರ್ಷ 50 ಶಾಲೆಗಳಲ್ಲಿ ಮೂಲಸೌಕರ್ಯ ಅವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ಬಲಿಚಕ್ರ ಶಾಲೆ ಸಹ ಸೇರಿದೆ. ಮುಂದಿನ ಮಾರ್ಚ್-ಏಪ್ರಿಲ್ ವರೆಗೆ ಖಾಯಂ ಶಿಕ್ಷಕರು ಬರಲಿದ್ದಾರೆ. ಶಾಲೆಗೆ ಆರ್.ಓ ಪ್ಲ್ಯಾಂಟ್, ಸಾಂಸ್ಕೃತಿಕ ವೇದಿಕೆ ವಿಸ್ತರಣೆ, ಶಾಲಾ ಕೊಠಡಿ ದುರಸ್ತಿ ಮತ್ತು ಹೊಸದಾಗಿ ನಿರ್ಮಾಣಕ್ಕೆ ಕೂಡಲೆ ಅಂದಾಜು ಪಟ್ಟಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಗ್ರಂಥಾಲಯ ವೀಕ್ಷಣೆ :

ಇದಕ್ಕೂ ಮುನ್ನ ಶಾಲೆಯ ಗ್ರಂಥಾಲಯವನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರೊಂದಿಗೆ ಸಚಿವ ಬಂಡಿ ಸಂಜಯ ಕುಮಾರ ಅವರು ವೀಕ್ಷಿಸಿ, ಅಲ್ಲಿ ಲಭ್ಯವಿರುವ ಪುಸ್ತಕಗಳ ಕುರಿತು ಶಾಲಾ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ವಂಶಿ, ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ಜಿಲ್ಲಾ ಪಂಚಾಯತ್ ಸಿಇಓ ಲವೀಶ್ ಓರಡಿಯಾ, ಎಸ್.ಪಿ.ಪೃತ್ವಿಕ್ ಶಂಕರ್, ಸಹಾಯಕ ಅಯುಕ್ತ ಹಂಪಣ್ಣ ಸಜ್ಜನ್, ಡಿ.ಎಚ್.ಓ ಡಾ.ಮಹೇಶ ಬಿರಾದಾರ, ಡಿ.ಡಿ.ಪಿ.ಐ ಚನ್ನಬಸಪ್ಪ ಮುಧೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ವೀರನಗೌಡ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ, ಯಾದಗಿರಿ ತಹಶೀಲ್ದಾರ್ ಸುರೇಶ ಅಂಕಲಗಿ, ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ಪಾಟೀಲ, ಸಿ.ಡಿ.ಪಿ.ಓ ವನಜಾಕ್ಷಿ, ತಾಲೂಕಾ ಪಂಚಾಯತ್ ಮಾಜಿ ಸದಸ್ಯ ಸಣ್ಣ ಹಣಮಂತ ಬೋಯಿನ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ರಾಮಪ್ಪ ಬೋಯಿನ್, ಪ್ರೌಢ ಶಾಲೆಯ ಮುಖ್ಯಗುರು ಅನ್ನಪೂರ್ಣ ಬಂಡಾರಕರ್, ಸಹ ಶಿಕ್ಷಕರಾದ ಬನ್ನಪ್ಪ ಮೈಲಾಪುರ, ಚಂದ್ರಶೇಖರ, ರಂಗಮ್ಮ, ಅನುಸೂಯಾದೇವಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಕ್ಕಳಿದ್ದರು. ಶಿಕ್ಷಕ ವಿನೋದ ಕುಮಾರ ಸ್ವಾಗತಿಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News