ಯಾದಗಿರಿ | ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ : ಜಿ.ಪಂ ಸಿಇಓ ಲವೀಶ
ಯಾದಗಿರಿ : ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು, ಸ್ವಚ್ಛತೆಯಿಂದಾಗಿ ವಿದ್ಯಾರ್ಥಿಗಳ ಓದಿಗೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ ತಿಳಿಸಿದರು.
ಸುರಪುರ ನಗರದ ಲಕ್ಷ್ಮೀ ದೇವಸ್ಥಾನದ ಬಳಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯ ಹಾಗೂ ನ್ಯಾಯಾಲಯದ ಬಳಿಯಲ್ಲಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಎಲ್ಲಾ ವಸತಿ ನಿಲಯಗಳ ನೀರಿನ ತೊಟ್ಟಿಗಳ ಮೇಲ್ಭಾಗದ ಮುಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಯಾವುದೇ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಯೋಜನಾ ನಿರ್ದೇಶಕ ಸಿ.ಬಿ ದೇವರಮನಿ, ಮುಖ್ಯ ಯೋಜನಾಧಿಕಾರಿ ಕುಮುಲಯ್ಯ, ಸಹಾಯಕ ಯೋಜನಾಧಿಕಾರಿ ಬಸವರಾಜಯ್ಯ ಸ್ವಾಮಿ, ಸುರಪುರ ತಾ.ಪಂ ಇಒ ಬಸವರಾಜ ಸಜ್ಜನ್, ಜಿ.ಪಂ ಎಡಿಪಿಸಿ ಬನ್ನಪ್ಪ, ಎಸ್.ಬಿ.ಎಮ್ ವೆಂಕಟೇಶ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮುಹಮ್ಮದ್ ಸಲೀಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.