ಯಾದಗಿರಿ | ಎರಡು ವಾರದಲ್ಲಿ ನೀರಿನ ನಳದ ಬಿಲ್ ಸರಿಪಡಿಸದಿದ್ದಲ್ಲಿ ನಗರಸಭೆಗೆ ಮುತ್ತಿಗೆ : ಮಾಜಿ ಸಚಿವ ರಾಜುಗೌಡ

Update: 2025-04-02 20:55 IST
ಯಾದಗಿರಿ | ಎರಡು ವಾರದಲ್ಲಿ ನೀರಿನ ನಳದ ಬಿಲ್ ಸರಿಪಡಿಸದಿದ್ದಲ್ಲಿ ನಗರಸಭೆಗೆ ಮುತ್ತಿಗೆ : ಮಾಜಿ ಸಚಿವ ರಾಜುಗೌಡ
  • whatsapp icon

ಸುರಪುರ : ನಿಮ್ಮಿಷ್ಟದಂತೆ ಕುಡಿಯುವ ನೀರಿನ ಬಿಲ್ ನೀಡುವ ಮೂಲಕ ಬಡ ಜನರಿಗೆ ತುಂಬಾ ತೊಂದರೆ ಮಾಡುತ್ತಿದ್ದೀರಿ ಕೂಡಲೇ ಅದನ್ನು ಸರಿಪಡಿಸಿ ಸರಿಯಾದ ಬಿಲ್ ನೀಡಬೇಕು, ಎರಡು ವಾರದಲ್ಲಿ ಸರಿಪಡಿಸದಿದ್ದಲ್ಲಿ ಮಹಿಳೆಯರು ಪೊರಕೆ ಹಿಡಿದು ಬಂದು ನಗರಸಭೆ ಮುತ್ತಿಗೆ ಹಾಕಲಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾದ್ಯಕ್ಷ ನರಸಿಂಹ ನಾಯಕ (ರಾಜುಗೌಡ) ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಬಡ ಜನರ ಸುಲಿಗೆ ಮಾಡಲು ಮುಂದಾಗಿದ್ದೀರಿ, ನೀವು ಎದ್ವಾತದ್ವಾ ಬಿಲ್ ನೀಡುವ ಮೂಲಕ ರಾಜುಗೌಡ ಮಾಡಿರುವ ಯೋಜನೆ ಇದೆ, ಎಂದು ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡುತ್ತಿರುವಂತಿದೆ. ಈ ಯೋಜನೆ ತರಲು ನಾನು ಸಚಿವ ಸ್ಥಾನ ಸಿಗುವುದನ್ನು ಬಿಟ್ಟು ನಿಗಮದ ಅಧ್ಯಕ್ಷನಾಗಿ ಈ ಯೋಜನೆ ತಂದಿರುವೆ, ಆದರೆ ನೀವು ನಿಮ್ಮಿಷ್ಟದಂತೆ ನೀರಿನ ಬಿಲ್ ನೀಡುವ ಮೂಲಕ ಯೋಜನೆಯಿಂದ ಜನರಿಗೆ ಸಮಸ್ಯೆ ಉಂಟು ಮಾಡುತ್ತಿದ್ದೀರಿ ಎಂದರು.

ಯಾರು ಎಷ್ಟು ನೀರು ಉಪಯೋಗಿಸಿದ್ದಾರೋ ಅಷ್ಟರ ಬಿಲ್ ನೀಡಬೇಕು ,ಆದರೆ ಒಬ್ಬರಿಗೆ 3 ಲಕ್ಷ ರೂ. ಬಿಲ್ ಬರುತ್ತದೆ ಎಂದರೆ ಹುಡುಗಾಟವಾಡುತ್ತಿದ್ದೀರಿ, ಕೂಡಲೇ ಇದನ್ನು ಸರಿಪಡಿಸಿ ಪ್ರತಿ ಮನೆಗೆ ಭೇಟಿ ನೀಡಿ ಎಷ್ಟು ನೀರಿನ ಮೀಟರ್ ಓಡಿರುತ್ತದೆ ಅಷ್ಟರ ಬಿಲ್ ನೀಡಬೇಕು. 1,920 ರೂ. ನೀಡಿರುವುದು ಅವೈಜ್ಞಾನಿಕವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ), ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ ಶಂಕರಗೌಡ ಹಾಗೂ ನಗರಸಭೆ ವಿರೋಧ ಪಕ್ಷದ ನಾಯಕ ವೇಣುಮಾಧವ ನಾಯಕ,ಸದಸ್ಯರಾದ ಸೋಮನಾಥ ನಾಯಕ ಡೊಣ್ಣಿಗೇರ,ನರಸಹಿಂಹಕಾಂತ ಪಂಚಮಗಿರಿ,ವಿಷ್ಣು ಗುತ್ತೇದಾರ,ಮಾನಪ್ಪ ಚಳ್ಳಿಗಿಡ, ಮುಖಂಡ ವೇಣುಗೋಪಾಲ ಜೇವರ್ಗಿ,ಶಂಕರ ನಾಯಕ,ಭೀಮಣ್ಣ ಬೇವಿನಾಳ,ಬಸವರಾಜ ಕೊಡೇಕಲ್ ಸೇರಿದಂತೆ ಅನೇಕ ಮುಖಂಡರು ಹಾಗೂ ಮಹಿಳೆಯರು ಮತ್ತು ನಗರಸಭೆ ಸಿಬ್ಬಂದಿ ಭಾಗವಹಿಸಿದ್ದರು.

ಪ್ರತಿಯೊಬ್ಬರಿಗೆ ಸಾವಿರಾರು ರೂಪಾಯಿ ಬಿಲ್ ನೀಡಿದರೆ ಎಲ್ಲಿಂದ ಕಟ್ಟುತ್ತಾರೆ, ನಳದ ಬಿಲ್ ಪರಿಷ್ಕರಣೆ ಮಾಡಿ ಸರಿಯಾದ ಬಿಲ್ ನೀಡದಿದ್ದಲ್ಲಿ ಗ್ರಾಹಕರ ನ್ಯಾಯಾಲಯದ ಮೂಲಕ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಎಳೆಯಲಾಗುವುದು. ನಳದ ಬಿಲ್ ನೀಡಲು ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಬೇಕು

-ನರಸಿಂಹ ನಾಯಕ (ರಾಜುಗೌಡ) ಮಾಜಿ ಸಚಿವ

ಪ್ರತಿ ಮನೆಗಳಿಗೆ ಭೇಟಿ ನೀಡಿ ಬಿಲ್‌ನಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಲಾಗುವುದು. ಜನರಿಗೆ ಯಾವುದೇ ರೀತಿಯಿಂದ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.

- ಜೀವನಕುಮಾರ ಪೌರಾಯುಕ್ತ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News