ಯಾದಗಿರಿ | ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಹೊಲಗಳಿಗೆ ನೀರು ಬೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಯಾದಗಿರಿ : ಕೃಷ್ಣಾ ಅಚ್ಚುಕಟ್ಟು ಪ್ರದೇಶ ರೈತರ ಹೊಲಗಳಿಗೆ ಏ.15 ರ ವರೆಗೆ ನಾರಾಯಣಪುರ ಜಲಾಶಯದಿಂದ ನೀರು ಹರಿಸಬೇಕೆಂದು ಆಗ್ರಹಿಸಿ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಕರೆ ನೀಡಿದ್ದ ಯಾದಗಿರಿ ಬಂದ್ ಶಾಂತಿಯುತವಾಗಿ ನಡೆಯಿತು.
ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಪ್ರಾಂತ ರೈತ ಸಂಘ, ಎಐಕೆಕೆಎಂಎಸ್ ಜಿಲ್ಲಾ ಸಂಘಟನೆ, ದಲಿತ ಸಂಘರ್ಷ ಸಮಿತಿ ಹೀಗೆ ವಿವಿಧ ಸಂಘಟನೆಗಳು ಸರ್ವ ಸಂಘಟನೆ ಒಕ್ಕೂಟದ ಹೆಸರಲ್ಲಿ ಕರೆ ನೀಡಿದ್ದ ಬಂದ್ ಗೆ ಸಾರ್ವಜನಿಕರು, ವ್ಯಾಪಾಸ್ಥರು ಸಂಪೂರ್ಣ ಬೆಂಬಲ ನೀಡುವ ಮೂಲಕ ಜಿಲ್ಲೆಯ ರೈತರ ಜೊತೆ ನಾವಿದ್ದೆವೆ ಎಂಬ ಸಂದೇಶ ರವಾನಿಸಿದರು.
ಬೆಳಗ್ಗೆ 6 ಗಂಟೆಯಿಂದಲೇ ಕರವೇ, ಇತರ ಸಂಘಟನೆಗಳ ಮುಖಂಡರು ನಗರದ ಎಲ್ಲಡೆ ಸಂಚರಿಸಿ ಬಂದ್ ಗೆ ಸಹಕರಿಸಬೇಕೆಂದು ಮನವಿ ಮಾಡಿದರು. ಜಿಲ್ಲೆಯ ವಿವಿಧಡೆಯ ಜನರು ಇಲ್ಲಿನ ಕೋರ್ಟ್ ಸಮೀಪದ ಮೇಡೋಡಿಸ್ಟ್ ಚರ್ಚ ಬಳಿ ಜಮಾಗೊಂಡು ಅಲ್ಲಿಂದ ನೇತಾಜಿ ಸುಭಾಷಚಂದ್ರ ಸರ್ಕಲ್ ವರೆಗೂ ಮೆರವಣಿಗೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಆರಂಭಿಸಿದರು.
ಒಂದಡೆ ಬಿಸಿಲು ಏರುತ್ತಿದ್ದರೇ ಇನ್ನೊಂದಡೆ ಸರ್ಕಲ್ ನಲ್ಲಿ ಅಪಾರ ಪ್ರಮಾಣದಲ್ಲಿ ಜನರು ಜಮಾಯಿಸಿ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ವಿವಿಧ ಸಂಘಟನೆಗಳ ಮುಖಂಡರಾದ ಶರಣಗೌಡ ಗೂಗಲ್, ದಾವಲ್ ಸಾಬ್ ನದಾಫ್, ಸೈದಪ್ಪ ಕೊಲ್ಲೂರ್, ಅನೀತಾ ಹಿರೇಮಠ, ಬಸವರಾಜ, ಮಾಯಾ ಸುರಪುರ, ಗುಂಡಪ್ಪ ಕಲಬುರಗಿ, ಭೀಮಶಾ ದಫೆದಾರ್ ಸೇರಿದಂತೆ ಅನೇಕರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮಲ್ಲಣ್ಣ ಚಿಂತಿ, ಎಸ್.ಎಂ.ಸಾಗರ್, ಬಸ್ಸುಗೌಡ, ಸಾಂಗ್ಲಿಯಾನ ಹಾಗೂ ಕರವೇ ಪ್ರವೀಣ ಶೇಟ್ಟಿ ಬಣದ ಪದಾಧಿಕಾರಿಗಳು, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕ ಸಂಘಟನೆ ಪ್ರಮುಖರು, ಸಿಐಟಿಯು ಸಂಘಟನೆ ಕಾರ್ಯಕರ್ತರು ಸೇರಿದಂತೆಯೇ ಅನೇಕರು ಇದ್ದರು.
ಕಳೆದ 15 ದಿನಗಳಿಂದ ನೀರಿಗಾಗಿ ಜಿಲ್ಲೆಯ ವಿವಿಧಡೆ ಹೋರಾಟಗಳು ನಡೆದರೂ ಜಿಲ್ಲೆಯ ಸಚಿವರು, ಶಾಸಕರು ಕ್ಯಾರೆ ಎನ್ನುತ್ತಿಲ್ಲ. ಇವರಿಗೆ ರೈತರ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ. ನೀರು ಹರಿಸುವವರೆಗೂ ಹೋರಾಟ ನಿಲ್ಲದು.
-ಟಿ.ಎನ್.ಭೀಮು ನಾಯಕ್, ಕರವೇ ಜಿಲ್ಲಾಧ್ಯಕ್ಷ ಯಾದಗಿರಿ
ಕೂಡಲೇ ಸರ್ಕಾರ ನೀರು ಬೀಡದಿದ್ದರೇ ಜಿಲ್ಲೆಯಲ್ಲಿ ರೈತರ ಸಾಮೂಹಿಕ ಆತ್ಮಹತ್ಯೆಗಳು ನಡೆಯುವ ಸಾಧ್ಯತೆಗಳಿವೆ. ಅನ್ನದಾತನ ಕಡೆ ಗಮನ ಹರಿಸಿ.
-ಚನ್ನಪ್ಪ ಆನೆಗುಂದಿ ಶಹಾಪುರ, ಅಧ್ಯಕ್ಷರು, ಪ್ರಾಂತ ರೈತ ಸಂಘ ಯಾದಗಿರಿ.
ನಾರಾಯಣಪುರ ಜಲಾಶಯದ ನೀರು ನಮ್ಮದು, ಕದ್ದುಮುಚ್ಚಿ ತೆಲಂಗಾಣಕ್ಕೆ ನೀರು ಬೀಡುವ ಮೂಲಕ ಅನ್ಯಾಯ ಮಾಡಿದ ಸರ್ಕಾರ ಕೂಡಲೇ ಏ.15 ರವರೆಗೆ ನೀರು ಹರಿಸಬೇಕು.
-ಮಲ್ಲಿಕಾರ್ಜುನ ಸತ್ಯಂಪೇಟೆ, ರಾಜ್ಯ ಉಪಾಧ್ಯಕ್ಷ, ರಾಜ್ಯ ರೈತ ಸಂಘ.
ಇಂತಹ ಮುಖ್ಯವಾದ ಸಮಯದಲ್ಲಿ ನೀರು ಹರಿಸಿದೇ ರೈತರೊಂದಿಗೆ ಚೆಲ್ಲಾಟ ಆಡುತ್ತಿರುವ ಈ ಸರ್ಕಾರಕ್ಕೆ ರೈತರ ಶಾಪ ತಟ್ಟದೇ ಇರದು. ಕಾರಣ ಏನು ನೆಪ ಹೇಳದೇ ಕೂಡಲೇ ನೀರು ಹರಿಸಿ.
-ಮರೆಪ್ಪ ಚಟ್ಟರಕಿಚಟ್ಟೇರಕರ್, ಜಿಲ್ಲಾ ಮುಖಂಡ, ದಸಂಸ ಯಾದಗಿರಿ
ಪರದಾಡಿದ ಪ್ರಯಾಣಿಕರು :
ಬಂದ್ ಬಗ್ಗೆ ಕಳೆದ ಎರಡು ದಿನಗಳಿಂದ ನಗರದ ಎಲ್ಲಡೆ ಸಂಘಟನೆ ಮುಖಂಡರು ಜಾಗೃತಿ ಮೂಡಿಸಿದ್ದರ ಪರಿಣಾಮ ಜನರು ಬುಧವಾರ ಹೆಚ್ಚಿನ ಸಂಖ್ಯೆಯಲ್ಲಿ ಹೊರಗೆ ಬಂದಿರಲಿಲ್ಲ, ಆದರೇ ಬೇರೆ, ಬೇರೆ ಊರುಗಳಿಂದ ಆಗಮಿಸಿದ ಪ್ರಯಾಣಿಕರು ಮತ್ತು ಕೆಲ ಸ್ಥಳಿಯ ಪ್ರಯಾಣಿಕರು ಬಂದ್ ನಿಂದಾಗಿ ಸಕಾಲಕ್ಕೆ ಊರುಗಳಿಗೆ ಮುಟ್ಟಲು ಪರದಾಡಿದರು.