ಯಾದಗಿರಿ: ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ ರದ್ದತಿಗೆ ಆಗ್ರಹಿಸಿ ಧರಣಿ

Update: 2024-11-26 09:57 GMT

ಯಾದಗಿರಿ: ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ವಿಹಾರದ ಸಂಪೂರ್ಣ ಆಡಳಿತ ಬೌದ್ಧರಿಗೆ ನೀಡಲು ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂವಿಧಾನ ದಿನವಾದ ಇಂದು ಜಿಲ್ಲಾಡಳಿತ ಕಚೇರಿ ಮುಂದೆ ಭಾರತೀಯ ಬೌದ್ಧ ಮಹಾಸಭಾ, ಅಖಿಲ ಭಾರತೀಯ ಬೌದ್ಧ ವೇದಿಕೆ, ಮತ್ತು ದಲಿತ ಪ್ರಗತಿಪರ ಸಂಘಟನೆಗಳು ಧರಣಿ ನಡೆಸಿದವು.

ಅಖಿಲ ಭಾರತೀಯ ಭೌದ್ಧ ವೇದಿಕೆ ಸದಸ್ಯ ಡಾ. ಭಗವಂತ ಅನ್ವಾರ ಮಾತಾನಾಡಿ ಬುದ್ಧನಿಗೆ ಜ್ಞಾನೋದಯವಾದ ಬೋಧಗಯಾ ಜಗತ್ತಿನಲ್ಲಿ ಇರುವ ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ. ಇದುವರೆಗೂ ಬೌದ್ಧ ಪರಂಪರೆಯ ಆಡಳಿತವನ್ನು ಸಂಪೂರ್ಣವಾಗಿ ಬೌದ್ಧರಿಗೆ ನೀಡಿಲ್ಲ. ತಲಾ ನಾಲ್ವರು ಬೌದ್ಧರು ಮತ್ತು ಹಿಂದೂಗಳು ಒಳಗೊಂಡ ಆಡಳಿತ ಮಂಡಳಿ ಇರುವುದು ಸರಿಯಲ್ಲ. ಸಂಪೂರ್ಣವಾಗಿ ವಿಹಾರದ ಆಡಳಿತ ಬೌದ್ಧರಿಗೆ ನೀಡಿ ಬೋಧಗಯಾ ಟೆಂಪಲ್ (ಬಿಟಿ) ಕಾಯ್ದೆ–1949 ರದ್ದು ಮಾಡಬೇಕು ಎಂದು ಆಗ್ರಹಿಸಿದರು

ದಲಿತ ಸಂವಿಧಾನದ ಕಲಂ 25, 26 ಮತ್ತು 29ರ ಅನ್ವಯ ಎಲ್ಲ ಜಾತಿ, ಜನಾಂಗದವರು ಸ್ವತಂತ್ರವಾಗಿ ದೇವಸ್ಥಾನ, ಮಂದಿರ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆಯಾ ಜಾತಿಗಳ ದೇವಸ್ಥಾನ, ಟ್ರಸ್ಟ್ಗಳಿಗೆ ಆಯಾ ಜಾತಿಗಳ ಪ್ರಮುಖರ ಆಡಳಿತ ಮಂಡಳಿಗಳಿವೆ. ಆದರೆ, ಬೋಧಗಯಾದಲ್ಲಿ ಇದಕ್ಕೆ ವಿರುದ್ಧವಾದ ಆಡಳಿತ ಮಂಡಳಿ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಹಿರಿಯ ದಲಿತ ಮುಖಂಡ ಮರೆಪ್ಪ ಚಟ್ಟೇರಕರ್ ಮಾತನಾಡಿ ಸಂವಿಧಾನ ವಿರೋಧಿಯಾದ ಬಿಟಿ ಕಾಯ್ದೆ–1949ರ ಅಡಿ ಆಡಳಿತ ಮಂಡಳಿಯೊಳಗೆ ಸೇರಿಸಿ ಹಿಂದೂ ಪುರೋಹಿತರು ಬೌದ್ಧರ ಇತಿಹಾಸ ಮತ್ತು ಸಂಸ್ಕೃತಿ ನಾಶ ಮಾಡಲು ಯತ್ನಿಸುತ್ತಿದ್ದಾರೆ. ಹಾಗಾಗಿ ಇದನ್ನು ವಿರೋಧಿಸಿ ಇಂದು ದೇಶಾದ್ಯಂತ ಈ ಬಗ್ಗೆ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ತರಲು ದೇಶದಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗಿದೆ ಎಂದರು.

ಮಲ್ಲಿಕಾರ್ಜುನ ಕ್ರಾಂತಿ, ನಾಗಣ್ಣ ಬಡಿಗೇರಿ, ಮಾಳಪ್ಪ ಕಿರದಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ನಿಂಗಪ್ಪ ಕೊಲ್ಲೂರಕರ್, ರಾಮಣ್ಣ ಸಾಧ್ಯಾಪೂರ, ಗೋಪಾಲ ತೆಳಗೇರಿ, ಮಹಾದೇವ್ ದಿಗ್ಗಿ, ರಾಹುಲ್ ಹುಲಿಮನಿ, ಸುರೇಶ್ ಬೊಮ್ಮನ್, ಪರಶುರಾಮ ಒಡೆಯರ್, ನಿಂಗಪ್ಪ ಬೀರನಾಳ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News