ಮ್ಯಾನ್ಮಾರ್ ಸೈಬರ್ ಅಪರಾಧ ಹಗರಣದಲ್ಲಿ 2000 ಭಾರತೀಯರು ಶಾಮೀಲು !

PC: istockphoto
ಹೈದರಾಬಾದ್: ಮ್ಯಾನ್ಮಾರ್-ಥಾಯ್ಲೆಂಡ್ ಗಡಿಭಾಗ ಮ್ಯಾವೆಡ್ಡಿಯಲ್ಲಿ ಸಶಸ್ತ್ರ ಉಗ್ರ ಸಂಘಟನೆಗಳು ನಿರ್ವಹಿಸುವ ಸೈಬರ್ ಅಪರಾಧ ಹಗರಣದಲ್ಲಿ ಸುಮಾರು 2000 ಮಂದಿ ಭಾರತೀಯರು ಶಾಮೀಲಾಗಿದ್ದಾರೆ ಎಂದು ಮ್ಯಾನ್ಮಾರ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಹಿರಂಗಪಡಿಸಿದೆ.
ಈ ಪೈಕಿ ಬಹುತೇಕ ಮಂದಿ ನಕಲಿ ಉದ್ಯೋಗ ಆಮಿಷಕ್ಕೆ ಒಳಗಾಗಿ ಇಲ್ಲಿಗೆ ಆಗಮಿಸಿದ್ದು, ಭಾರತೀಯರನ್ನು ಮತ್ತು ಅಮೆರಿಕನ್ನರನ್ನು ಗುರಿಮಾಡಿ ಆನ್ ಲೈನ್ ವಂಚನೆಗಳನ್ನು ನಡೆಸುತ್ತಿದ್ದಾರೆ. ಕೆಲ ಸಂತ್ರಸ್ತರನ್ನು ಇಂಥ ವಂಚನೆ ಜಾಲದಿಂದ ರಕ್ಷಿಸಲಾಗಿದ್ದು, ಈ ಜಾಲ ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಈ ಪೈಕಿ ಹಲವು ಮಂದಿಗೆ ತಾವು ಎದುರಿಸುತ್ತಿರುವ ಅಪಾಯಗಳ ಬಗ್ಗೆ ಅರಿವು ಇಲ್ಲ ಎಂದು ಹೇಳಿದೆ.
ಈ ಜಾಲದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮತ್ತೆ ಸ್ವದೇಶಕ್ಕೆ ಕಳುಹಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದ್ದು, ಉದ್ದೇಶಪೂರ್ವಕವಾಗಿ ಈ ಜಾಲದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಸಂತ್ರಸ್ತರಲ್ಲ; ಅವರು ಅಪರಾಧಿಗಳು ಎಂದು ಎಚ್ಚರಿಕೆ ನೀಡಿದೆ. ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್ ಮತ್ತು ಥಾಯ್ಲೆಂಡ್ ನಿಂದ ಬರುವ ಉದ್ಯೋಗ ಆಮಿಷಗಳ ಬಗ್ಗೆ ಪ್ರಯಾಣಕ್ಕೆ ಮುನ್ನ ದೃಢೀಕರಿಸಿಕೊಳ್ಳುವಂತೆ ರಾಯಭಾರ ಕಚೇರಿ ಸಲಹೆ ಮಾಡಿದೆ.
ಮ್ಯಾವೆಡ್ಡಿ ಕುಖ್ಯಾತ ಸೈಬರ್ ಅಪರಾಧ ಕೇಂದ್ರವಾಗಿ ರೂಪುಗೊಂಡಿದ್ದು, ರಹಸ್ಯವಾಗಿ ಆನ್ ಲೈನ್ ವಂಚನೆ ಜಾಲವನ್ನು ನಿರ್ವಹಿಸಲಾಗುತ್ತಿದೆ. ನಕಲಿ ಉದ್ಯೋಗ ಭರವಸೆಗೆ ಬಲೆಬಿದ್ದು ಹಲವು ಮಂದಿ ಈ ಜಾಲದಲ್ಲಿ ಸಿಲುಕಿದ್ದಾರೆ. ಒಮ್ಮೆ ಈ ಜಾಲದಲ್ಲಿ ಸಿಲುಕಿದರೆ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28