ಮಂಗಳೂರು| ವಿಶೇಷ ಮಕ್ಕಳ ವಲಯ ಮಟ್ಟದ ಒಲಿಂಪಿಕ್ಸ್: 700ಕ್ಕೂ ಅಧಿಕ ಮಂದಿ ಭಾಗಿ
ಮಂಗಳೂರು, ನ.9: ಲಯನ್ಸ್ ಕ್ಲಬ್ ವೆಲೆನ್ಸಿಯ ಮಂಗಳೂರು, ವಿಶೇಷ ಒಲಿಂಪಿಕ್ಸ್ ಭಾರತ್-ಕರ್ನಾಟಕ, ದ.ಕ. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ವಿಶೇಷ ಮಕ್ಕಳ ವಲಯ ಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 700ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ ಕ್ರೀಡಾಸ್ಪೂರ್ತಿ ಪ್ರದರ್ಶಿಸಿದರು.
ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಹೆಚ್ಚಿನ ಸಾಮರ್ಥ್ಯ ಇರುವ ಮಕ್ಕಳು ಮತ್ತು ಕಡಿಮೆ ಸಾಮರ್ಥ್ಯದ ಮಕ್ಕಳು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಈ ಕ್ರೀಡಾಕೂಟದಲ್ಲಿ ವಿಜೇತರಾದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಲಯನ್ಸ್ ಜಿಲ್ಲೆ 317ಡಿ ನ ಮೊದಲ ಉಪಗವರ್ನರ್ ಕೆ.ಅರವಿಂದ್ ಶೆಣೈ ಉದ್ಘಾಟಿಸಿದರು. ವಿಶೇಷ ಕೌಶಲ್ಯದ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವಿಶೇಷ ಒಲಿಂಪಿಕ್ಸ್ ದಾರಿದೀಪ ಎಂದರು. ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜಾ ಮುಖ್ಯ ಅತಿಥಿಗಳಾಗಿದ್ದರು.
ಮಂಗಳೂರು ವೆಲೆನ್ಸಿಯಾ ಲಯನ್ಸ್ ಕ್ಲಬ್ ಅಧ್ಯಕ್ಷ ಲೆಸ್ಲಿ ಡಿ’ಸೋಜಾ ಸ್ವಾಗತಿಸಿದರು. ಎಸ್‌ಒಬಿಕೆ ಮತ್ತು ಜಿಲ್ಲಾ ಯುವ ಕಲ್ಯಾಣ ಮತ್ತು ಕ್ರೀಡಾ ಇಲಾಖೆಯೊಂದಿಗೆ 25 ವರ್ಷಗಳಿಂದ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವ ಬಗ್ಗೆ ವಿವರಿಸಿದರು. ಎಸ್‌ಒಬಿಕೆ ಕ್ರೀಡಾ ನಿರ್ದೇಶಕ ನಾರಾಯಣ್ ಶೇರಿಗಾರ್ ಉದ್ಘಾಟನಾ ಅಭಿಪ್ರಾಯ ನೀಡಿದರು.
ಸಂಜೆ ಸಮಾರೋಪ ಸಮಾರಂಭ ನಡೆಯಿತು. ವಿಶೇಷ ಒಲಿಂಪಿಕ್ಸ್ ಭಾರತ್-ಕರ್ನಾಟಕದ ಉಪಾಧ್ಯಕ್ಷ ರೂಪ್ ಸಿಂಗ್, ಕೋಶಾಧಿಕಾರಿ ಆನಂದ ಡಿ.ಸಿ., ಲಯನ್ಸ್ ಕ್ಲಬ್ ವೆಲೆನ್ಸಿಯಾ ಸ್ಥಾಪಕ ಅಧ್ಯಕ್ಷ-ಉದ್ಯಮಿ ನವೀನ್ ಚಂದ್ರ ಡಿ.ಸುವರ್ಣ, ಪ್ರಮುಖರಾದ ಜ್ಞಾನೇಶ್, ಶಾಂತಳಾ ಭಟ್, ಸಿರಿಲ್ ಜೀವನ್, ಆಸ್ವಾಲ್ಡ್ ಡಿಕುನ್ಹಾ ಉಪಸ್ಥಿತರಿದ್ದರು.