ನ. 9ರಂದು ಮಂಗಳೂರಿನಲ್ಲಿ ವಲಯ ಮಟ್ಟದ ವಿಶೇಷ ಒಲಿಂಪಿಕ್ಸ್

Update: 2024-11-06 17:04 GMT

ಮಂಗಳೂರು, ನ.6: ಲಯನ್ಸ್ ಕ್ಲಬ್ ವೆಲೆನ್ಸಿಯಾ ಮಂಗಳೂರು ಇದರ ಆಶ್ರಯದಲ್ಲಿ ನವೆಂಬರ್ 9ರಂದು ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ವಲಯ ಮಟ್ಟದ ವಿಶೇಷ ಒಲಿಂಪಿಕ್ಸ್‌ನ್ನು ನಗರದ ಮಂಗಳಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ವೆಲೆನ್ಸಿಯಾದ ಅಧ್ಯಕ್ಷ ಲೆಸ್ಲಿ ಡಿ ಸೋಜ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈ ವಲಯ ಮಟ್ಟದ ಒಲಿಂಪಿಕ್ಸ್ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವಿಶೇಷ ಒಲಿಂಪಿಕ್‌ನ ತಯಾರಿಗೆ ಪ್ರಮುಖ ಹಂತವಾಗಿದೆ ಎಂದರು.

ಸ್ಪೆಶಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಮತ್ತು ದ.ಕ. ಯುವ ಕಲ್ಯಾಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದೆ. 1987ರಲ್ಲಿ ಸ್ಥಾಪನಗೊಂಡ ಲಯನ್ಸ್ ಕ್ಲಬ್ ವೆಲೆನ್ಸಿಯಾ ಸಮಾಜ ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನಮ್ಮ ಸೇವಾ ಕಾರ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು, ಕ್ಯಾನ್ಸರ್ ಮತ್ತು ಎಚ್‌ಐವಿ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅಗತ್ಯ ಸವಲಭ್ಯ ಒದಗಿಸುವ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದರು.

1999ರಲ್ಲಿ ರಾಜ್ಯ ಮಟ್ಟದ ವಿಶೇಷ ಒಲಿಂಪಿಕ್ಸ್ ಆಯೋಜಿಸುವ ಮೂಲಕ ವಿಶೇಷ ಒಲಿಂಪಿಕ್ಸ್ ಭಾರತ್ ಜೊತೆ ನಮ್ಮ ಬಾಂಧವ್ಯ ಪ್ರಾರಂಭವಾಯಿತು. ಇದಾದ ನಂತರ ವಿಕಲಚೇತನರ ಜಿಲ್ಲಾ ಮಟ್ಟದ, ರಾಜ್ಯ ಮಟ್ಟ, ದಕ್ಷಿಣ ಭಾರತದ 7 ರಾಜ್ಯಗಳ ಕ್ರೀಡಾ ಕೂಟ, ಮತ್ತು ಹೋಪ್ 2000 ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸೇರಿದಂತೆ 18 ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ ಎಂದು ಹೇಳಿದರು.

10 ವಿಭಾಗಗಳಲ್ಲಿ ಸ್ಪರ್ಧೆ: ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಇದರ ನಿರ್ದೇಶಕರಾದ ನಾರಾಯಣ ಶೇರಿಗಾರ್ ಪೂರಕ ಮಾಹಿತಿ ನೀಡಿ ಕ್ರೀಡಾಕೂಟ ನ.9ರಂದು ಬೆಳಗ್ಗೆ 9:30ಕ್ಕೆ ಆರಂಭವಾಗಲಿದ್ದು, ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ಇರುತ್ತದೆ. ಹೈಯರ್ ಎಬಿಲಿಟಿ 5 ವಿಭಾಗ ಮತ್ತು ಲೋವರ್ ಎಬಿಲಿಟಿಯಲ್ಲಿ 5 ವಿಭಾಗ ಸೇರಿದಂತೆ 10 ವಿಭಾಗಗಳಲ್ಲಿ ಕ್ರೀಡಾಕೂಟ ನಡೆಯಲಿದ್ದು, ಒಟ್ಟು 450ಕ್ಕೂ ಅಧಿಕ ಕ್ರೀಡಾಪಟುಗಳು, 200 ಸಹಾಯಕರು, 50 ಸ್ವಯಂ ಸೇವಕರು ಸೇರಿದಂತೆ 750 ಮಂದಿ ಭಾಗವಹಿಸಲಿದ್ದಾರೆ. ಸಾರ್ವಜನಕರಿಗೆ ಕ್ರೀಡಾಕೂಟದ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಇದರ ಕೋಶಾಧಿಕಾರಿ ಸಿಸ್ಟರ್ ಮರಿಯಾ ಶ್ರುತಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಒಸ್ವಾಲ್ಡ್ ಡಿ ಕುನ್ಹಾ, ಕೋಶಾಧಿಕಾರಿ ಸಿರಿಲ್ ಜೀವನ್, ನವೀನ್ ಚಂದ್ರ ಸುವರ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News