ತ್ರಿಪುರಾದ ರೋಗಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ
ಮಂಗಳೂರು: ಜೀವನ್ಮರಣದ ಹೋರಾಟದಲ್ಲಿದ್ದ ತ್ರಿಪುರಾದ ರೋಗಿಯೊಬ್ಬರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರ ಸತತ ಪ್ರಯತ್ನದ ಫಲವಾಗಿ ಚೇತರಿಸಿಕೊಂಡಿದ್ದಾರೆ.
ತ್ರಿಪುರಾದ ಅಗರ್ತಲಾದ ಆಸ್ಪತ್ರೆಯಲ್ಲಿ 58ರ ಹರೆಯ ರೋಗಿಯೊಬ್ಬರು 14 ದಿನಗಳ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆದರೂ, ವೈದ್ಯರ ಪ್ರಯತ್ನ ಫಲ ನೀಡದ ಹಿನ್ನೆಲೆಯಲ್ಲಿ ರೋಗಿಯನ್ನು ಮಂಗಳೂರಿಗೆ ವಿಮಾನದಲ್ಲಿ ಕರೆತಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್, ಅಧಿಕ ರಕ್ತದೊತ್ತಡ (ಎಚ್‌ಟಿಎನ್), ಡಯಾಲಿಸಿಸ್‌ನಲ್ಲಿ ಮೂತ್ರಪಿಂಡಕ್ಕೆ ಆಗಿರುವ ತೀವ್ರ ಗಾಯದ ಸಮಸ್ಯೆ (ಎಕೆ ಐ), ತೀವ್ರವಾದ ಕೋಲಾಂಜೈಟಿಸ್, ಸೆಪ್ಟಿಕ್ ಶಾಕ್ ಮತ್ತು ಹೃದಯ ಸ್ತಂಬನದ ತೊಂದರೆ ಎದುರಿಸಿದ್ದ ರೋಗಿಯು ಜೀವನ್ಮರಣ ಸ್ಥಿತಿಯಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿದ್ದರು.
ರೋಗಿಯು ಕೋಮಾದಲ್ಲಿದ್ದರು. ವೈದ್ಯರಾದ ಡಾ.ವಿಷ್ಣು ಪಿ ಎಸ್, ರೋಗಿಯು ಎದುರಿಸುತ್ತಿರುವ ಸಂಕೀರ್ಣ ವೈದ್ಯಕೀಯ ಸವಾಲುಗಳನ್ನು ಪರಿಹರಿಸಲು ಡಾ.ವಿಜಯ್ ಸುಂದರಸಿಂಗ್ ನೇತೃತ್ವದ ಕ್ರಿಟಿಕಲ್ ಕೇರ್ ಮೆಡಿಸಿನ್ ತಂಡದೊಂದಿಗೆ ಶ್ರಮಿಸಿದರು. 32 ದಿನಗಳ ಬಳಿಕ ರೋಗಿಯ ಸ್ಥಿತಿಯು ಕ್ರಮೇಣ ಸುಧಾರಿಸಿತು. ಅವರು ಕಳೆದ 10 ದಿನಗಳಿಂದ ಡಯಾಲಿಸಿಸ್‌ನಿಂದ ಹೊರಗುಳಿದಿದ್ದಾರೆ. ಸಹಾಯಕರ ನೆರವಿನೊಂದಿಗೆ ನಡೆದಾಡಲು ಶಕ್ತರಾಗಿದ್ದಾರೆ ಎಂದು ತಿಳಿದುಬಂದಿದೆ.
ಡಾ.ವಿಷ್ಣು ಪಿ ಎಸ್, ಡಾ.ವಿಜಯ್ ಸುಂದರಸಿಂಗ್ (ತೀವ್ರ ತಜ್ಞ), ಡಾ.ಅಶ್ವಿನ್ ಎಸ್.ಪಿ (ನೆಫ್ರಾಲಜಿ), ಡಾ.ಶ್ರೀಶಂಕರ್ ಬೈರಿ (ಪಲ್ಮನಾಲಜಿ), ಡಾ.ಜೋಸ್ಟೋಲ್ ಪಿಂಟೊ (ಹೃದ್ರೋಗ), ಡಾ.ಜೆಫ್ರಿ ಲೂಯಿಸ್ (ಜನರಲ್ ಮೆಡಿಸಿನ್), ಡಾ. ಐಶ್ವರ್ಯಾ ಗಟ್ಟಿ (ಫಿಸಿಯೋಥೆರಪಿ), ಡಾ. ಚಂದನಾ ಪೈ (ಹೆಮಟಾಲಜಿ), ಮತ್ತು ಡಾ. ವಿನಯ್ ರಾವ್ (ಇಎನ್ಟಿ), ರೋಗಿಯ ಚೇತರಿಕೆಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.