ಮಂಗಳೂರು: ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ
ಮಂಗಳೂರು: ಕೊಂಕಣಿ ಲ್ಯಾಂಗ್ವೇಜ್ ಆ್ಯಂಡ್ ಕಲ್ಚರಲ್ ಫೌಂಡೇಶನ್ ವತಿಯಿಂದ ನಗರ ಹೊರವಲಯದ ಶಕ್ತಿನಗರದಲ್ಲಿ ರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಶ್ವ ಕೊಂಕಣಿ ಸಮಾರೋಹದ ಭಾಗವಾಗಿ ಬುಧವಾರ ವಿಶ್ವ ಕೊಂಕಣಿ ವಾರ್ಷಿಕ ಪುರಸ್ಕಾರ ಪ್ರದಾನ ಮಾಡಲಾಯಿತು.
ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸನ್ಮಾನ ಪ್ರಶಸ್ತಿಯನ್ನು ಗೋವಾದ ಚಿಂತಕ ವಂ.ಮೌಜಿನ್ಹೊ ದೆ ಅತಾಯಿದ್ ಅವರಿಗೆ ಪ್ರದಾನ ಮಾಡಲಾಯಿತು. ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಗೋವಾದ ಕವಿ ಪ್ರಕಾಶ ಡಿ. ನಾಯಕ್ ಅವರ ‘ಮೊಡಕೂಳ್’ ಕೃತಿಗೆ ನೀಡಲಾಯಿತು. ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ವನ್ನು ಮುಂಬೈನ ವೀಣಾ ಅಡಿಗೆ ಹಾಗೂ ಮಂಗಳೂರಿನ ಸೇವಾ ಭಾರತಿ ಸಂಸ್ಥೆಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಗೋವಾ ಮೂಲದ ಉದ್ಯಮಿ ಅವಧೂತ್ ತಿಂಬ್ಲೊ ನಾವು ಎಷ್ಟೇ ಭಾಷೆಗಳಲ್ಲಿ ಪ್ರಾವಿಣ್ಯತೆ ಯಿದ್ದರೂ ಕೂಡ ಮಾತೃ ಭಾಷೆ ಮರೆಯಲು ಸಾಧ್ಯವಿಲ್ಲ. ಕನಸಿನಲ್ಲಿ ಮಾತನಾಡುವುದು ಕೂಡ ಮಾತೃ ಭಾಷೆಯಾಗಿದೆ. ಕೊಂಕಣಿ ಭಾಷೆ, ಸಾಹಿತ್ಯ ಮತ್ತದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಜನರತ್ತ ತಲುಪಿಸಲು ವರ್ಚುವಲ್ ವಿಶ್ವವಿದ್ಯಾನಿಲಯದ ಅಗತ್ಯವಿದೆ ಎಂದರು.
ಕೊಂಕಣಿ ಭಾಷಿಗರು ಜಾಗತಿಕವಾಗಿ ಸಾಧಕರಾದ ಬಳಿಕವೂ ಕೊಂಕಣಿ ಭಾಷೆಯ ಸೇವೆ ಮಾಡುವುದನ್ನು ಮರೆತಿಲ್ಲ. ತಾಯ್ನಾಡಿಗೆ ಬಂದು ಮಾತೃ ಭಾಷೆಯನ್ನು ಪ್ರೀತಿಸುವುದನ್ನು ಕಲಿತಿದ್ದಾರೆ ಎಂದು ಅವಧೂತ್ ತಿಂಬ್ಲೊ ಶ್ಲಾಘಿಸಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ ಮಾತನಾಡಿ ಶಿಕ್ಷಣ ಹಾಗೂ ಉದ್ಯೋಗದ ನಿಮಿತ್ತ ಜನ ಬೇರೆ ಬೇರೆ ದೇಶಗಳಿಗೆ ತೆರಳುತ್ತಿದ್ದರೂ ತಾಯ್ನಾಡಿಗೆ ಮರಳಿದಾಗಲೆಲ್ಲಾ ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇದರಲ್ಲಿ ಸಂಘ ಸಂಸ್ಥೆಗಳ ಪಾತ್ರವೂ ಪ್ರಮುಖವಾಗಿದೆ. ಕೊಂಕಣಿ ಭಾಷೆ ಸಾರ್ವತ್ರಿಕಗೊಳ್ಳಲು ಇನ್ನಷ್ಟು ಸಾಹಿತ್ಯ ಪ್ರಕಾರಗಳು, ಸಿನಿಮಾಗಳ ಅಗತ್ಯವಿದೆ ಎಂದರು.
ಕೊಂಕಣಿ ಭಾಷೆ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ಜಗದೀಶ್ ಶೆಣೈ, ಡಾ. ಕಿರಣ್ ಬುಡ್ಕುಳೆ, ಗಿಲ್ಬರ್ಟ್ ಡಿಸೋಜ, ಕಾರ್ಯದರ್ಶಿ ಡಾ. ಕೆ. ಮೋಹನ್ ಪೈ, ಖಜಾಂಚಿ ಬಿ.ಆರ್.ಭಟ್, ಸಹ ಕಾರ್ಯದರ್ಶಿ ಸ್ನೇಹ ಶೆಣೈ, ಸಿಎಒ ಡಾ. ಬಿ. ದೇವ್‌ದಾಸ್ ಪೈ, ಟ್ರಸ್ಟಿಗಳಾದ ರಮೇಶ್ ನಾಯಕ್, ಮೆಲ್ವಿನ್ ರೋಡ್ರಿಗಸ್ ಉಪಸ್ಥಿತರಿದ್ದರು.