ಡಾ. ತಾಳ್ತಜೆ ವಸಂತ ಕುಮಾರ್‌ಗೆ `ಕನಕ ಗೌರವ ಪ್ರಶಸ್ತಿ'

Update: 2024-11-06 17:13 GMT

ಉಪ್ಪಿನಂಗಡಿ: ಸಂತಕವಿ ಕನಕದಾಸ ಮತ್ತು ತತ್ತ್ವಪದಕಾರ ಅಧ್ಯಯನ ಕೇಂದ್ರವು ಕೊಡಮಾಡುವ `ಕನಕ ಗೌರವ ಪ್ರಶಸ್ತಿ'ಗೆ ಹಿರಿಯ ಸಾಹಿತಿ  ಉಪ್ಪಿನಂಗಡಿ ಗ್ರಾಮದ ಪಂಜಳದ ಡಾ. ತಾಳ್ತಜೆ ವಸಂತ ಕುಮಾರ ಅವರನ್ನು ಆಯ್ಕೆ ಮಾಡಲಾಗಿದೆ.

ನಾನಾ ಕಾರಣಗಳಿಂದ ನಾಲ್ಕು ವರ್ಷದಿಂದ `ಕನಕ ಗೌರವ ಪ್ರಶಸ್ತಿ' ಹಾಗೂ `ಕನಕ ಯುವ ಪುರಸ್ಕಾರ'ವನ್ನು ಘೋಷಣೆ ಮಾಡದೇ ಇದ್ದ ಅಧ್ಯಯನ ಕೇಂದ್ರವು ಈ ಬಾರಿ ಎರಡೂ ಪ್ರಶಸ್ತಿಗೆ ಸಾಹಿತಿಗಳನ್ನು ಆಯ್ಕೆ ಮಾಡಿದ್ದು, ನ.18ರಂದು ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕನಕ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ಪ್ರಶಸ್ತಿ ಯನ್ನು ಪ್ರದಾನ ಮಾಡಲಿದ್ದಾರೆ. `ಕನಕ ಗೌರವ ಪ್ರಶಸ್ತಿ'ಯು 75 ಸಾವಿರ ರೂ. ನಗದು ಮತ್ತು ಪುರಸ್ಕಾರ ಹಾಗೂ `ಕನಕ ಯುವ ಪುರಸ್ಕಾರ'ವು 50 ಸಾವಿರ ರೂ. ನಗದು ಮತ್ತು ಪುರಸ್ಕಾರವನ್ನು ಒಳಗೊಂಡಿದೆ.

`ಕನಕ ಗೌರವ ಪ್ರಶಸ್ತಿ': 2021-22ನೇ ಸಾಲಿನ ಪ್ರಶಸ್ತಿಗೆ ಡಾ. ತಾಳ್ತಜೆ ವಸಂತ ಕುಮಾರ, 2022-23ನೇ ಸಾಲಿನ ಪ್ರಶಸ್ತಿಗೆ ಡಾ. ನೀಲಪ್ಪ ಮೈಲಾರಪ್ಪ ಹಾವೇರಿ, 2023-24ನೇ ಸಾಲಿನ ಪ್ರಶಸ್ತಿಗೆ ಡಾ. ಎಚ್.ಎನ್. ಮುರಳೀಧರ ಬೆಂಗಳೂರು, 2024-25ನೇ ಸಾಲಿನ ಪ್ರಶಸ್ತಿಗೆ ಡಾ. ಜಿ.ವಿ. ಆನಂದಮೂರ್ತಿ ತುಮಕೂರು ಅವರನ್ನು ಆಯ್ಕೆ ಮಾಡಲಾಗಿದೆ.

`ಕನಕ ಯುವ ಪುರಸ್ಕಾರ': 2021-22ನೇ ಸಾಲಿನ ಪ್ರಶಸ್ತಿಗೆ ಡಾ. ಅನಿಲ್ ಕುಮಾರ್, ಮೈಸೂರು, 2022-23ನೇ ಸಾಲಿನ ಪ್ರಶಸ್ತಿಗೆ ಡಾ. ಚಿಕ್ಕಮಗಳೂರು ಗಣೇಶ್, 2023-24ನೇ ಸಾಲಿನ ಪ್ರಶಸ್ತಿಗೆ ಡಾ. ಉಮೇಶ ಎಂ. (ಉಬಾಮ), ವಿಜಯನಗರ ಅವರನ್ನು ಆಯ್ಕೆ ಮಾಡಲಾಗಿದೆ. 2024-25ನೇ ಸಾಲಿಗೆ ಅರ್ಹ ಯುವ ಪುರಸ್ಕೃತರು ಅಲಭ್ಯವಾಗಿದ್ದರಿಂದ ಯಾರನ್ನೂ ಆಯ್ಕೆ ಮಾಡಿಲ್ಲ ಎಂದು ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದ್ದಾರೆ.

ಡಾ. ತಾಳ್ತಜೆಯವರ ಬಗ್ಗೆ ಒಂದಿಷ್ಟು: ದಿವಂಗತ ಕೃಷ್ಣ ಭಟ್ಟ ಹಾಗೂ ಲಕ್ಷ್ಮಿ ಅವರ ಸುಪುತ್ರನಾದ ಡಾ. ತಾಳ್ತಜೆ ವಸಂತ ಕುಮಾರ ಅವರು ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ ಎಂಬ ವಿಷಯದಲ್ಲಿ ಪಿಎಚ್ ಡಿ ಪದವಿಯನ್ನು ಪಡೆದಿರುತ್ತಾರೆ. ಸುದೀರ್ಘ 37 ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯನ್ನು ಮಾಡಿರುವ ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಮುಂಬೈ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿದ್ದಾರೆ. ಇವರ ಮಾರ್ಗದರ್ಶನ ದಲ್ಲಿ 17 ಮಂದಿ ಪಿಎಚ್‍ಡಿ ಹಾಗೂ 18 ಮಂದಿ ಎಂಫಿಲ್ ಪಡೆದಿರುತ್ತಾರೆ.

ಸಾಹಿತ್ಯ ಕ್ಷೇತ್ರದಲ್ಲಿ 55 ವರ್ಷಗಳ ಸುದೀರ್ಘ ಸೇವೆಯನ್ನು ನೀಡಿದ ಇವರು ಈವರೆಗೆ ಒಟ್ಟು 24 ಕೃತಿಗಳನ್ನು ರಚಿಸಿದ್ದು, ಇವರು ರಚಿಸಿದ ಅನೇಕ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ 1993ರಲ್ಲಿ ಭಾರತ ಜರ್ಮನಿ ಸಾಂಸ್ಕೃತಿಕ ವಿನಿಮಯ ಯೋಜನೆಯ ಅನ್ವಯ ಜರ್ಮನ್ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ಉಪ ನ್ಯಾಸ ನೀಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ರಾಜ್ಯ ಘಟಕದ ಸ್ಥಾಪಕ ಅಧ್ಯಕ್ಷರಾಗಿಯೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಇತ್ತೀಚಿಗೆ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News