ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ

Update: 2023-11-05 16:52 GMT

ಕೊಣಾಜೆ : ‘ಜೀವನ ಪರ್ಯಂತ ನಿರಂತರ ಕಲಿಕೆ ಅನ್ನುವುದರ ಅರ್ಥ ನಾವು ಮತ್ತೊಬ್ಬರ ಅಂತರಾಳದ ಆತ್ಮವಿಶ್ವಾಸ ಹಾಗೂ ಅನುಭವಗಳಿಂದ ಕಲಿಯುತ್ತಾ ಹೋಗುವುದು. ಇದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಹಾಗೂ ನಾವು ನಿರ್ವಹಿಸುವ ಕರ್ತವ್ಯದ ಮೌಲ್ಯವರ್ಧನೆಗೆ ನೆರವಾಗುತ್ತದೆ. ನಿರಂತರ ಕಲಿಕೆ, ಬದುಕಿನ ಎಲ್ಲಾ ಮಗ್ಗುಲುಗಳಲ್ಲೂ ಯಶಸ್ಸು ಕಾಣಲು, ಬಹು ಮುಖ್ಯವಾಗಿರುವ ಸಂಗತಿ’ ಎಂದು ಅಮೆರಿಕಾದ ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಅಂತಾರಾಷ್ಟ್ರೀಯ ಸಂಬಂಧಗಳ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಒಮಿದ್ ಅನ್ಸಾರಿ ನುಡಿದರು.

ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣವನ್ನು ಮಾಡುತ್ತಿದ್ದರು. ‘ನೂತನ ಪದವೀಧರರು ತಾವು ಗಳಿಸಿದ ಕೌಶಲ್ಯವನ್ನು ಸಮಾಜದ ಉನ್ನತೀಕರಣಕ್ಕೆ ವಿನಿಯೋಗಿಸ ಬೇಕು’ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿಶ್ರಾಂತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹಾಗೂ ಉದ್ಯಮಿ ಶಶಿಕಿರಣ್ ಶೆಟ್ಟಿ ಅವರಿಗೆ ಸಮಾಜದ ಏಳಿಗೆಗೆ ಸಲ್ಲಿಸಿರುವ ಅಪಾರ ಕಾಣಿಕೆಯನ್ನು ಗುರುತಿಸಿ ‘ಡಾಕ್ಟರ್ ಆಫ್ ಸೈನ್ಸ್ (ಹಾನರಿಸ್ ಕೌಸಾ)’ ಪ್ರದಾನ ಮಾಡಲಾಯಿತು.

ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅವರು. ತಮ್ಮ ಭಾಷಣದಲ್ಲಿ, ‘ನಿಟೆ ಶಿಕ್ಷಣ ಟ್ರಸ್ಟ್ ನ ಮೂರು ಕ್ಯಾಂಪಸ್‍ಗಳನ್ನು (ನಿಟ್ಟೆ, ಮಂಗಳೂರು ಹಾಗೂ ಬೆಂಗಳೂರು) ವಿಶ್ವದರ್ಜೆಗೆ ಉನ್ನತೀಕರಿಸಲು ಸರಿಸುಮಾರು 1000 ಕೋಟಿ ಅಂದಾಜು ವೆಚ್ಚದ ಯೋಜನೆ ಕಾರ್ಯಗತ ವಾಗುತ್ತಿದೆ’, ಎಂದರು. ‘ನಿಟ್ಟೆ ವಿಶ್ವವಿದ್ಯಾಲಯದ ಪದವೀಧರರು ತಮ್ಮ ಭವಿಷ್ಯದ ವೃತ್ತಿಜೀವನದಲ್ಲಿ ಸಂಸ್ಥೆಯ ರಾಯಭಾರಿಗಳ ರೀತಿ, ಸಂಸ್ಥೆಯ ಒಳಿತಿಗೆ ಪರಿಶ್ರಮಿಸಬೇಕು ಎಂದರು.

25 ಡಾಕ್ಟರೇಟ್, 397 ಸ್ನಾತಕೋತ್ತರ, ಫೆಲೋಶಿಪ್‍ಗಳು ಸೇರಿದಂತೆ ಒಟ್ಟು 1,256 ವಿದ್ಯಾರ್ಥಿಗಳು ಪದವಿಗಳನ್ನು ಗಳಿಸಿದರು. 18 ದತ್ತಿ ಚಿನ್ನದ ಪದಕಗಳು, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 13 ಚಿನ್ನದ ಪದಕಗಳು ಹಾಗೂ 65 ಮೆರಿಟ್ ಸರ್ಟಿಫಿಕೇಟ್‍ಗಳನ್ನು ಅತ್ಯುತ್ತಮ ಅಂಕಗಳಿಸಿದವರಿಗೆ ವಿತರಿಸಲಾಯಿತು.

ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ‘ವಿಶ್ವವಿದ್ಯಾಲಯ, ನ್ಯಾಶನಲ್ ಇನ್ಸ್ಟಿಟ್ಯೂಶನಲ್ ರ್ಯಾಂಕಿಂಗ್ ಭಾರತದ ವಿಶ್ವವಿದ್ಯಾಲಯಗಳ ಮೌಲ್ಯಮಾಪನದ ಪಟ್ಟಿಯಲ್ಲಿ 65ನೇ ಸ್ಥಾನಗಳಿಸಿರುವುದು ಹೆಮ್ಮೆಯ ಸಂಗತಿ’ ಎಂದು ಭಾಷಣದಲ್ಲಿ ನುಡಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಾಧಿಪತಿ ಹಾಗೂ ನಿಟ್ಟೆ ಶಿಕ್ಷಣ ಸಂಸ್ಥೆಯ ಹಿರಿಯ ಸಲಹೆಗಾರರಾದ ಪ್ರೊ. ಎನ್.ಆರ್. ಶೆಟ್ಟಿ, ವಿಶ್ವವಿದ್ಯಾಲಯದ ಆಸ್ಪತ್ರೆ ಆಡಳಿತ ವಿಭಾಗದ ಸಹ-ಕುಲಾಧಿಪತಿಗಳಾದ ಡಾ. ಎಂ. ಶಾಂತಾರಾಮ್ ಶೆಟ್ಟಿ, ಆಡಳಿತ ವಿಭಾಗದ ಸಹ-ಕುಲಾಧಿಪತಿ ವಿಶಾಲ್ ಹೆಗ್ಡೆ, ವಿಶ್ವವಿದ್ಯಾಲಯದ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಗಳ ಉಪಾಧ್ಯಕ್ಷ ಡಾ. ಸತೀಶ್ ಕುಮಾರ್ ಭಂಡಾರಿ, ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಡಾ. ಗೋಪಾಲ್ ಮುಗೆರಾಯ, ಬೆಂಗಳೂರಿನ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಹಾಗೂ ಪರೀಕ್ಷಾ ನಿಯಂತ್ರಕರಾದ ಪ್ರೊ. ಡಾ. ಪ್ರಸಾದ್ ಬಿ. ಶೆಟ್ಟಿ ಉಪಸ್ಥಿತರಿದ್ದರು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News