ಎ.15ರಂದು ಪೆಜಾರ್ ಚರ್ಚ್ನಲ್ಲಿ 241ನೇ ವರ್ಷದ ಪವಿತ್ರ ಶಿಲುಬೆ ಯಾತ್ರೆ
ಮಂಗಳೂರು, ಎ.12: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಕಳವಾರು ಪೆಜಾರ್ (ಪೇಜಾವರ)ಸಂತ ಜೋಸೆಫರ ದೇವಾಲಯದಲ್ಲಿ 241ನೇ ವರ್ಷದ ಪವಿತ್ರ ಶಿಲುಬೆ ಯಾತ್ರೆ ಎ.15ರಂದು ನಡೆಯಲಿದೆ.
ಯೇಸುಕ್ರಿಸ್ತರ ಜನನದ ಜ್ಯುಬಿಲಿ ವರ್ಷದ ಪ್ರಯುಕ್ತ ಈ ಬಾರಿ ವಿಶೇಷವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚರ್ಚ್ನ ನೇತೃತ್ವದಲ್ಲಿ 240 ವರ್ಷಗಳ ಹಿಂದೆ ಬೂದಿ ಬುಧವಾರದಂದು ಆರಂಭಗೊಂಡ ಶಿಲಬೆಯಾತ್ರೆ ಕಾರ್ಯಕ್ರಮ ನಿರಂತರವಾಗಿ ಆಯೋಜಿಸಲ್ಪಡುತ್ತಿದೆ. ಪವಿತ್ರ ಶಿಲುಬೆಯ ನೆರಳಿನಲ್ಲಿ ಭರವಸೆಯ ಪಯಣಿಗರು ಈ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ವಲಯ ಪ್ರಧಾನ ಧರ್ಮಗುರು ವಂ. ರುಡಾಲ್ಫ್ ರವಿ ಡೇಸಾ ಶನಿವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.
ಚರ್ಚ್ನ ಪ್ರಧಾನ ಧರ್ಮಗುರು ವಂ. ರೊನಾಲ್ಡ್ ಡಿಸೋಜ ಮಾತನಾಡಿ, ಅಂದು ಬೆಳಗ್ಗೆ 9ರಿಂದ ಅಪರಾಹ್ನ 3ರವರೆಗೆ ದೇವರ ವಾಕ್ಯದ ಧ್ಯಾನಕೂಟ, ಸ್ತುತಿ ಆರಾಧನೆ ಹಾಗೂ ನಿರಂತರ ಬಿನ್ನಹ ಪ್ರಾರ್ಥನೆ. 3 ಗಂಟೆಗೆ ಕರುಣೆಯ ಜಪಸರ ಪ್ರಾರ್ಥನೆ. 3:30ಕ್ಕೆ ಕೊರ್ಡೆಲ್ ಚರ್ಚ್ನ ಧರ್ಮಗುರು ಫಾ. ಕ್ಲಿಫರ್ಡ್ ಫೆರ್ನಾಂಡಿಸ್ ಪರಮ ಪ್ರಸಾದದ ಆರಾಧನೆ ನಡೆಸಲಿದ್ದಾರೆ. 5 ಗಂಟೆಗೆ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಸಾಂಭ್ರಮಿಕ ಬಲಿಪೂಜೆ ನೆರವೇರಿಸಲಿದ್ದಾರೆ. 6:15ಕ್ಕೆ ಶಿಲುಬೆಯ ಹಾದಿ ನಡೆಯಲಿದ್ದು, 12ನೇ ಸ್ಥಳದ ನಂತರ ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ. ಫಾ.ಡೆನಿಸ್ ಡೇಸಾ ಪ್ರಬೋಧನೆ ನೀಡಲಿದ್ದಾರೆ. 13ನೇ ಸ್ಥಳದ ನಂತರ ಯೇಸುವಿನ ಪಾರ್ಥಿವ ಶರೀರದ ದರ್ಶನ ಮತ್ತು ಪವಿತ್ರ ಶಿಲುಬೆಗೆ ನಮನ ಸಲ್ಲಿಕೆ ನಡೆಯಲಿದೆ. ಸುಮಾರು 7 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪೇಜಾವರ ವಲಯದ ಪಾಲನಾ ಸಮಿತಿ ಕಾರ್ಯದರ್ಶಿ ಪ್ರಮಿಳಾ ಪೆರಿಸ್, ಚರ್ಚ್ನ ಪಾಲನಾ ಸಮಿತಿ ಉಪಾಧ್ಯಕ್ಷ ಅನಿಲ್ ಪೆರಿಸ್, ಕಾರ್ಯದರ್ಶಿ ಫಿಲೋಮಿನಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.