ಎ.20ರೊಳಗೆ ದ.ಕ. ಜಿಲ್ಲಾಧಿಕಾರಿ ನೂತನ ಕಚೇರಿ ಸಂಕೀರ್ಣದ ಕಾಮಗಾರಿಪೂರ್ಣ: ಸಚಿವ ಗುಂಡೂರಾವ್

ಮಂಗಳೂರು, ಎ.5: ನಗರದ ಪಡೀಲ್‌ನಲ್ಲಿ ಜಿಲ್ಲಾಧಿಕಾರಿಯ ನೂತನ ಕಚೇರಿ ಸಂಕೀರ್ಣದ ನಿರ್ಮಾಣ ಕಾರ್ಯ ಎಪ್ರಿಲ್ 20ರೊಳಗೆ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯ ನೂತನ ಕಚೇರಿ ಸಂಕೀರ್ಣದ ಕಾಮಗಾರಿಯನ್ನು ಶನಿವಾರ ಬೆಳಗ್ಗೆ ಸಚಿವರು ಪರಿಶೀಲಿಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ. ಕಾಮಗಾರಿಯನ್ನು ಎಪ್ರಿಲ್ 15ರ ಮೊದಲು ಪೂರ್ಣ ಗೊಳಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭಕ್ಕೆ ಒಂದು ದಿನ ನಿಗದಿಪಡಿಸುವಂತೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿದ್ದೇವೆ. ಡಿಸಿ ಕಚೇರಿ ಸಂಕೀರ್ಣದ ಉದ್ಘಾಟನೆಯ ಜೊತೆಗೆ, ಸಿಎಂ ಒಳಾಂಗಣ ಕ್ರೀಡಾಂಗಣ ಮತ್ತು ಇತರ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವ ಗುಂಡೂ ರಾವ್ ಹೇಳಿದರು.
ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಡಿಸಿ ಕಚೇರಿ ಸಂಕೀರ್ಣಕ್ಕೆ ಅಡಿಗಲ್ಲು ಹಾಕಲಾ ಗಿತ್ತು. ಈ ಕಚೇರಿಯ ನಿರ್ಮಾಣಕ್ಕೆ ಅಗತ್ಯದ ಅನುದಾನವನ್ನು ಅವರೇ ಇದೀಗ ಒದಗಿಸಿದ್ದಾರೆ. ಡಿಸಿ ಕಚೇರಿ ಸಂಕೀರ್ಣ ಕಟ್ಟಡವು ಸರಕಾರಿ ಸೇವೆಗಳನ್ನು ಸುಗಮವಾಗಿ ಒದಗಿಸಲು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.
ಹೊಸ ಡಿಸಿ ಕಚೇರಿ ಸಂಕೀರ್ಣದ ಎಲ್ಲಾ ಕೆಲಸಗಳು ಉದ್ಘಾಟನೆಗೂ ಮುನ್ನ ಪೂರ್ಣಗೊಳ್ಳಲಿವೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದ.ಕ. ಜಿಲ್ಲೆಯ ಜನರಿಗೆ ಈ ಕಚೇರಿಯ ಮೂಲಕ ಉತ್ತಮ ಸೇವೆ ಲಭ್ಯವಾಗಲಿದೆ. ಸಂಕೀರ್ಣದಲ್ಲಿರುವ ಸಭಾಂಗಣದಲ್ಲಿ ಆಸನಗಳ ವ್ಯವಸ್ಥೆಗೆ ಸ್ವಲ್ಪ ಸಮಯ ಬೇಕಾಗಬಹುದು. ಉದ್ಘಾಟನೆಯ ನಂತರ, ಜಿಲ್ಲಾಧಿಕಾರಿ ಕಚೇರಿ, ದಾಖಲೆ ಕೊಠಡಿಗಳು, ಖಜಾನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗಣಿ, ಸಮಾಜ ಕಲ್ಯಾಣ ಇಲಾಖೆಗಳು, ಉಪ ನೋಂದಣಿ ಕಚೇರಿ ,ಶಿಕ್ಷಣ ಸೇರಿದಂತೆ 31 ಕಚೇರಿಗಳನ್ನು ಹೊಸ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿವರಿಸಿದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.