ಬಾವುಟಗುಡ್ಡೆಯಲ್ಲಿ 100 ಅಡಿಗೂ ಎತ್ತರದ ಧ್ವಜಸ್ತಂಭ ಶೀಘ್ರ ನಿರ್ಮಾಣ: ದಿನೇಶ್ ಗುಂಡೂರಾವ್

Update: 2025-04-05 14:48 IST
ಬಾವುಟಗುಡ್ಡೆಯಲ್ಲಿ 100 ಅಡಿಗೂ ಎತ್ತರದ ಧ್ವಜಸ್ತಂಭ ಶೀಘ್ರ ನಿರ್ಮಾಣ: ದಿನೇಶ್ ಗುಂಡೂರಾವ್
  • whatsapp icon

ಮಂಗಳೂರು, ಎ. 5: ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಅಡಿಗೂ ಅಧಿಕ ಎತ್ತರದ ಧ್ವಜಸ್ತಂಭ ನಿರ್ಮಾಣ ಮಾಡುವ ಮೂಲಕ ದೇಶಪ್ರೇಮ ಪ್ರೇರೇಪಿಸುವ ಕಾರ್ಯ ಮಾಡುವುದಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ನಡೆದ ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆದ್ದು ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ವಿಜಯ ಧ್ವಜ ಹಾರಿಸಿ ಮತ್ತು 13 ದಿನ ಆಡಳಿತ ನಡೆಸಿದ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ಬಾವುಟಗುಡ್ಡೆಯ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಮುಂಭಾಗ ಶನಿವಾರ ಹುತಾತ್ಮರಿಗೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.

ವೀರರ ಸ್ಮರಣೆ ಮಾಡುವ ಮೂಲಕ ನಮ್ಮ ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ವಿರರ ತ್ಯಾಗ ಬಲಿದಾವನ್ನು ಮರೆಯಬಾರದು. ಕೆದಂಬಾಡಿ ರಾಮಯ್ಯ ಗೌಡರ ಸಹಿತ ಅನೇಕರು 1837ರಲ್ಲಿ ಬ್ರಿಟೀಷರ ವಿರುದ್ದ ಚಳುವಳಿ ಆರಂಭಿಸಿ, ಇದೇ ಪ್ರದೇಶದಲ್ಲಿ ಬ್ರಿಟೀಷರ ಧ್ವಜ ಕಿತ್ತು ಹಾಕಿ, ನಮ್ಮ ಧ್ವಜ ಹಾರಾಡಿಸಿದ್ದರು. ಅವರ ಹೋರಾಟ ಸ್ಮರಣೀಯ. ಪ್ರಥಮ ಸ್ವಾತಂತ್ರ್ಯ ಹೋರಾಟವಾಗಿ ಇದು ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ತು ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಈ ಪ್ರದೇಶಕ್ಕೆ ಬಾವುಟಗುಡ್ಡೆ ಎಂಬ ಹೆಸರಿದ್ದು, ಬಾವುಟ ಇಲ್ಲ ಎಂದು ಹೇಳಲಾಗುತ್ತಿತ್ತು. ಸ್ವಾತಂತ್ರ್ಯ ಸಂಗ್ರಾಮದ ನೆನಪಿಗೆ ಇಲ್ಲಿ ಅತೀ ದೊಡ್ಡ ಧ್ವಜಸ್ತಂಭ ನಿರ್ಮಿಸಲಾಗುವುದು. ಕೆಲವೊಂದು ತಾಂತ್ರಿಕ ಕಾರಣದಿಂದ ಕೆಲಸ ವಿಳಂಬಗೊಂಡಿದ್ದು, ಸದ್ಯದಲ್ಲೆ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಕೆದಂಬಾಡಿ ರಾಮಯ್ಯ ಗೌಡರ ಬಲಿದಾನ ಸ್ಮರಣೆ ಮಾಡಬೇಕು. ಅವರ ಹೋರಾಟವನ್ನು ಪಠ್ಯದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಆಗಬೇಕು ಎಂದರು.

ಕಾವೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಗ್ಯಾರೆಂಟಿ ಅನುಷ್ಠಾನದ ಅಧ್ಯಕ್ಷ ಭರತ್ ಮುಂಡಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮನಪಾ ಮಾಜಿ ಸದಸ್ಯರಾದ ವಿನಯರಾಜ್, ಪ್ರವಿಣ್ ಚಂದ್ರ ಆಳ್ವ, ಅನಿಲ್ ಕುಮಾರ್, ದ.ಕ. ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್, ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಗುಡ್ಲೆಗುತ್ತು, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ

ಯೋಗೀಶ್ ಶೆಟ್ಟಿಜೆಪ್ಪು, ದಕ್ಷಿಣಕನ್ನಡ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಬಾಲಕೃಷ್ಣ ಡಿ.ಬಿ., ಪ್ರಮುಖರಾದ ಸುರೇಶ್ ಬೌಲ್, ಪೂರ್ಣಿಮಾ, ರಕ್ಷಿತ್ ಪುತ್ತಿಲ ಸಹಿತ ಮತ್ತಿತರರು ಇದ್ದರು.

ವಿಜಯ ದಿನಾಚರಣೆ ಕಾರ್ಯಕ್ರಮ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ಮಂಗಳೂರು ಮತ್ತು ತುಳುನಾಡ ರಕ್ಷಣಾವೇದಿಕೆಯ ಮಂಗಳೂರು ಇದರ ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. 1ರಿಂದ 4ನೇ ತರಗತಿಯವರಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಬಳಿ ರಾಷ್ಟ್ರ ಧ್ವಜಸ್ತಂಭ ಹೀಗಿದ್ದರೆ ಚಂದ, 5 ರಿಂದ 7 ನೇ ತರಗತಿಯವರಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಉದ್ಯಾನವನ -ಹೀಗಿದ್ದರೆ ಚಂದ, 8 ರಿಂದ 10 ನೇ ತರಗತಿಯವರಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ರಸ್ತೆ ಹೀಗಿದ್ದರೆ ಚಂದ. ಸಾರ್ವಜನಿಕರಿಗೆ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಯುದ್ಧ ಸ್ಮಾರಕ -ಹೀಗಿದ್ದರೆ ಚಂದ ಎಂಬ ವಿಷಯಗಳ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News