ಮಂಗಳೂರಿಗೆ ಶೀಘ್ರವೇ ವಂದೇ ಭಾರತ್ ಸ್ಲೀಪರ್ ರೈಲು: ಸಚಿವ ಸೋಮಣ್ಣ

ಮಂಗಳೂರು, ಎ. 12: ಮುಂದಿನ ಒಂದೂವರೆ ತಿಂಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಭೋಗಿಗಳು ಬರಲಿದ್ದು, ಒಂದನ್ನು ಮಂಗಳೂರಿಗೂ ನೀಡಲಾಗುವುದು ಎಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಶನಿವಾರ ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗಿನ ವಿಸ್ತರಣೆಗೆ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು.

ಮಂಗಳೂರು, ಬೆಂಗಳೂರು ಸಂಸ್ಕಾರ, ಸಂಸ್ಕೃತಿ ಮತ್ತು ಸಹಬಾಳ್ವೆಗೆ ದೇಶದಲ್ಲಿ ಹೆಸರು ಪಡೆದಿದೆ. ಕರಾವಳಿ ಭಾಗದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದ ಅಭಿವೃದ್ಧಿ ಕಾರ್ಯ 19 ಕೋಟಿ ರೂ.ಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆಗಸ್ಟ್‌ನೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಮಾಸ್ಟರ್ ಪ್ಲಾನ್ ತಯಾರಾಗಿದ್ದು, ಟೆಂಡರ್ ಕರೆದು ಎರಡು ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದವರು ಹೇಳಿದರು.
ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಮೃತ್ ಭಾರತ್ ಯೋಜನೆಯಡಿ 24 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಭಕ್ತಾಧಿಗಳ ತಾಣವಾಗಿರುವ ಆ ನಿಲ್ದಾಣದಲ್ಲಿ ವಿಕಲಚೇತನರಿಗೂ ಪೂರಕವಾಗಿ ಎಕ್ಸಲೇಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಸೆಪ್ಟಂಬರ್ 25ರೊಳಗೆ ಈ ಎಲ್ಲ ಕಾಮಗಾರಿಗಳು ಪೂಣಗೊ ಳ್ಳಲಿವೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸಕಲೇಶಪುರ ನಡುವಿನ ಗೊಂದಲ ಅವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಡಿಪಿಆರ್ ಆಗಿದೆ. ಈ ಮೂಲಕ ಮೆಮೋ ರೈಲನ್ನು ಇಲ್ಲಿಗೆ ತರುವ ಕೆಲಸವೂ ಆಗಲಿದೆ. ರೈಲು ಸುರಕ್ಷತೆಯ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಗಳು ಆಗಿದ್ದು, ಅವಘಡಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರು ಕವಚ್ ಎನ್ನುವ ಹೊಸ ಯೋಜನೆ ಯನ್ನು ಸಮರ್ಪಣೆ ಮಾಡಿದ್ದಾರೆ. 10,000 ಕಿ.ಮೀ. ವ್ಯಾಪ್ತಿಯಲ್ಲಿ ಈ ಕವಚ್ ಅಳವಡಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ 1800 ಕಿ.ಮೀ. ವ್ಯಾಪ್ತಿಯಲ್ಲಿ ಕವಚ್ ಒಂದೂವರೆ ವರ್ಷದಲ್ಲಿ ಕಾರ್ಯಾರಂಭಿಸಲಿದೆ. ಸಕಲೇಶಪುರ ಕುಕ್ಕೆ ನಡುವೆ 2000 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಹಾಗೂ ರಸ್ತೆ ಮಾರ್ಗ ಜತೆ ಜತೆ ಯಾಗಿ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಗಡ್ಕರಿ ಜತೆ ಸಭೆ ಆಗಿದೆ. ಜಮ್ಮು ಕಾಶ್ಮೀರ ಮಾದರಿಯಲ್ಲಿ ಸುರಂಗ ಮಾರ್ಗ ಮಾಡುವ ಆಲೋಚನೆ ಇದೆ ಎಂದವರು ಹೇಳಿದರು.

ಸ್ಥಳೀಯವಾಗಿ ಲೆವೆಲ್ ಕ್ರಾಸಿಂಗ್ ಸಮಸ್ಯೆಗಳನ್ನೂ ಬಗೆಹರಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಮೂರು ತಿಂಗಳಿಗೊಮ್ಮೆ ಹೊಸ ರೂಪುರೇಷೆಯೊಂದಿಗೆ ಡಿಆರ್‌ಎಂ ಮುಖ್ಯಸ್ಥರೊಂದಿಗೆ ಜನಪ್ರತಿನಿಧಿಗಳ ಸಭೆ ನಡೆಸಲು ಕ್ರಮ ವಹಿಸಲಾಗುವುದು. ಕರ್ನಾಟಕದ ರೈಲ್ವೇ ಅಭಿವೃದ್ಧಿಯಲ್ಲಿ ಹೊಸ ಶಖೆ ಆರಂಭ ವಾಗಿದೆ. ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರಕಾರವೇ ಸಂಪೂರ್ಣ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಸಚಿವ ಸೋಮಣ್ಣ ವಿವರ ನೀಡಿದರು.
ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ನಗರ ಅಭಿವೃದ್ಧಿಗೆ ಸಂವಹನದ ಜತೆಗೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ರೈಲು ಸಂಚಾರ ವಿಸ್ತರಿಸುವ ಮೂಲಕ ಉತ್ತಮ ಕಾರ್ಯವಾಗಿದೆ ಎಂದರು.
ರೈಲ್ವೇ ಕ್ರಾಸ್‌ಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಗೇಟ್ ಅಳವಡಿಸುವ ಕಾರ್ಯ ಸಮಂಜಸವಾಗಿದ್ದರೂ, ಹಿಂದಿನ ವ್ಯವಸ್ಥೆ ಬದಲಾವಣೆ ಮಾಡುವ ವೇಳೆ ಸ್ಥಳೀಯರ ಗಮನಕ್ಕೆ ತಂದು ಕ್ರಮ ವಹಿಸುವುದು ಮುಖ್ಯವಾಗಿರುತ್ತದೆ. ಈ ಬಗ್ಗೆ ರೈಲ್ವೇ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಒಂದು ಕಾಲದಲ್ಲಿ ಮಂಗಳೂರು ಸುಬ್ರಹ್ಮಣ್ಯ ನಡುವೆ ಓಡಾಡುತ್ತಿದ್ದ ರೈಲನ್ನು ಮತ್ತೆ ಪುನರಾರಂಭಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ದ.ಕ.ಜಿಲ್ಲೆಯ ಜನರದ್ದಾಗಿತ್ತು. ಹೊಸ ರೈಲುಗಳು ಜಿಲ್ಲೆಗೆ ಬರುವುದು ದುಸ್ತರ ಎನ್ನುವ ಸಂದರ್ಭದಲ್ಲಿಯೇ ಮಂಗಳೂರು ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಲು ಸಚಿವ ಸೋಮಣ್ಣ ರವರ ಮುತುವರ್ಜಿಯಿಂದ ಸಾಧ್ಯವಾಗಿದೆ. ಹಳಿಯ ವಿದ್ಯುದೀಕರಣ ಸಂಪೂರ್ಣಗೊಂಡ ಬಳಿಕ ಇದನ್ನು ಮೆಮೋ ರೈಲು ಆಗಿ ಪರಿವರ್ತನೆಗೊಳಿಸಬೇಕು ಎಂದರು.
ಮಂಗಳೂರು ಬೆಂಗಳೂರು ನಡುವೆ ಹೆದ್ದಾರಿ ಇಲಾಖೆ ಜತೆ ಸಮಾಲೋಚನೆ ಮಾಡಿಕೊಂಡು ರೈಲು ಹಾಗೂ ರಸ್ತೆ ಕಾಮಗಾರಿಯನ್ನು ಜತೆಯಾಗಿ ಶಿರಾಡಿ ಘಾಟ್ ಮೂಲಕ ಮಾಡುವ ಕಾರ್ಯ ಆಗಬೇಕು. ಡಿಆರ್‌ಎಂಗಳ ಸಭೆಯನ್ನು ಮೂರು ತಿಂಗಳಿಗೊಮ್ಮೆ ಸಮರ್ಪಕವಾಗಿ ನಡೆಸಲು ಜವಾಬ್ದಾರಿಯನ್ನು ಸಂಬಂಧಪಟ್ಟವರಿಗೆ ವಹಿಸಬೇಕು ಎಂದು ಅವರು ಈ ಸಂದರ್ಭ ಸಚಿವರಿಗೆ ಬೇಡಿಕೆ ಸಲ್ಲಿಸಿದರು.
ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಗೀರಥಿ ಮುರಳ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ನಾಗರಾಜ ಶೆಟ್ಟಿ, ಪಾಲ್ಘಾಟ್ ವಿಭಾಗದ ಡಿಆರ್‌ಎಂ ಅರುಣ್ ಕುಮಾರ್ ಚತುರ್ವೇದಿ ಮೊದಲಾದವರು ಉಪಸ್ಥಿತರಿದ್ದರು.
ಸಂಸದ ಚೌಟ ಬಗ್ಗೆ ಸಚಿವ ಸೋಮಣ್ಣ ಪ್ರಶಂಸೆ
ದ.ಕ. ಜಿಲ್ಲೆಯ ಲೋಕಸಭಾ ಸದಸ್ಯ, ಯುವ ಸಂಸದ ಬ್ರಿಜೇಶ್ ಚೌಟ ತಮ್ಮ ಜಿಲ್ಲೆಗೆ ಅಗತ್ಯವಾದ ಯಾವುದೇ ಕೆಲಸ ಕಾರ್ಯಗಳನ್ನು ಸಚಿವರ ಬೆನ್ನು ಹತ್ತಿ ಹಠ ಹಿಡಿದು ಮಾಡಿಸುತ್ತಾರೆ. ಇದು ಒಬ್ಬ ಲೋಕಸಭಾ ಸದಸ್ಯನಿಗೆ ಇರಬೇಕಾದ ಒಳ್ಳೆಯ ಲಕ್ಷಣ. ಅಂತಹ ಸಂಸದರನ್ನು ಜಿಲ್ಲೆಯ ಜನತೆ ಪಡೆದಿದ್ದಾರೆ ಎಂದು ಕೇಂದ್ರ ಸಚಿವ ಸೋಮಣ್ಣರವರು ಪ್ರಶಂಸೆ ವ್ಯಕ್ತಪಡಿಸಿದರು.
ರೈಲ್ವೇ ಪ್ರಯಾಣಿಕರು, ಹೋರಾಟಗಾರಿಗೆ ಸಂತಸ
ರೈಲ್ವೇ ಹಳಿ ಮೀಟರ್‌ಗೇಜ್ ಆಗಿದ್ದ ಅವಧಿಯಲ್ಲಿ ಸಂಚರಿಸುತ್ತಿದ್ದ ಈ ಮಂಗಳೂರು- ಸುಬ್ರಹ್ಮಣ್ಯ ನಡುವಿನ ಪ್ರಯಾಣಿಕ ರೈಲು, ಹಳಿ ಬ್ರಾಡ್‌ಗೇಜ್ ಆಗಿ ಪರಿರ್ವತನೆಯ ವೇಳೆಗೆ 1995ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಮಂಗಳೂರು ಸೆಂಟ್ರಲ್‌ನಿಂದ ಕಬಕ ಪುತ್ತೂರು ವರೆಗೆ ಸಂಚರಿಸುತ್ತಿರುವ ರೈಲನ್ನು ಹಿಂದಿನಂತೆ ಸುಬ್ರಹ್ಮಣ್ಯಕ್ಕೆ ವಿಸ್ತರಿಸಬೇಕೆಂದು ರೈಲ್ವೇ ಹೋರಾಟಗಾರರು ಹಲವು ಮನವಿ, ಒತ್ತಾಯ ವ್ಯಕ್ತವಾಗಿದ್ದವು. ಸೋಮಣ್ಣರವರು ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರಿನಲ್ಲಿ ನಡೆದ ಪ್ರಥಮ ಉನ್ನತ ಮಟ್ಟದ ರೈಲ್ವೇ ಅಧಿಕಾರಿಗಳ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ ಒತ್ತಾಯಿಸಿದ್ದರು. ಇಂದು ಮತ್ತೆ ರೈಲು ಪುನರಾರಂಭಕ್ಕೆ ಹಸಿರು ನಿಶಾನೆ ನೀಡುವ ಸಂದರ್ಭ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಪಾರ ಸಂಖ್ಯೆಯ ರೈಲು ಪ್ರಯಾಣಿಕರ ಜತೆ, ರೈಲು ಹೋರಾಟಗಾರರು ಸಾಕ್ಷಿಯಾಗಿ ಸಂತಸ ವ್ಯಕ್ತಪಡಿಸಿದರು.