ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಮೀಸಲು ಜಮೀನು ಅರ್ಹರಿಗೆ ಒದಗಿಸಲು ಒತ್ತಾಯ

Update: 2025-04-12 15:58 IST
ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಮೀಸಲು ಜಮೀನು ಅರ್ಹರಿಗೆ ಒದಗಿಸಲು ಒತ್ತಾಯ
  • whatsapp icon

ಮಂಗಳೂರು, ಎ.12: ಮಂಗಳೂರು ಮಹಾನಗರ ಪಾಲಿಕೆಯು ಪಾಲಿಕೆಯ ಪೌರಕಾರ್ಮಿಕರಿಗೆ ಕುಡುಪು ಗ್ರಾಮದ ಮಂಗಳ ಜ್ಯೋತಿ ಬಳಿ ಮನೆ ನಿರ್ಮಿಸಲು ಮೀಸಲಿರಿಸಿದ ಜಾಗವನ್ನು ಪೌರ ಕಾರ್ಮಿಕರಲ್ಲದವರು ಅಕ್ರಮವಾಗಿ ಬಳಸಿಕೊಂಡಿದ್ದಾರೆ. ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಲು ಒದಗಿಸಿದ ಮೀಸಲು ಜಮೀನುಗಳನ್ನು ಕೂಡಲೇ ನೈಜ ಮತ್ತು ಅರ್ಹ ಪೌರ ಕಾರ್ಮಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘ ಆಗ್ರಹಿಸಿದೆ.

ಮಂಗಳ ಜ್ಯೋತಿ ಬಳಿ ಸರ್ವೆ ನಂಬ 85/1ರ ಜಮೀನನ್ನು 150 ಪೌರ ಕಾರ್ಮಿಕರಿಗೆ ತಲಾ ಮೂರು ಸೆಂಟ್ಸ್ ನಂತೆ ಮನೆ ನಿರ್ಮಿಸುವುದಕ್ಕಾಗಿ 8.94 ಎಕರೆ ಮೀಸಲಿಡಲು 1996ರಲ್ಲಿ ಸರಕಾರದಿಂದ ಆದೇಶ ಬಂದಿತ್ತು. ಇತ್ತೀಚಿಗೆ ಕೆಲವು ಸಂಘಟನೆಗಳು ಸೇರಿ ಒಂದು ಸಮುದಾಯದವರಿಗೆ ಈ ಮೀಸಲು ಜಮೀನನ್ನು ನೀಡಬೇಕೆಂದು ಒತ್ತಡ ಹಾಕುತ್ತಿದೆ. ಅಂತಹ ಸಂಘಟನೆಗಳ ಮನವಿ ಅಥವಾ ಒಂದು ಸಮುದಾಯದವರ ಬೇಡಿಕೆಯನ್ನು ಮನ್ನಿಸಬಾರದೆಂದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಯ ಆಯುಕ್ತರಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಕೂಡಲೇ ಕ್ರಮ ಕೈಗೊಂಡು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಹಿರಿಯ ಪೌರ ಕಾರ್ಮಿಕರಿಗೆ ಮೀಸಲು ಜಮೀನನ್ನು ಹಂಚಿಕೆ ಮಾಡಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಅನಿಲ್ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಈಗಾಗಲೇ ಪೌರಕಾರ್ಮಿಕರ ಪೈಕಿ ಕೆಲವರು ಬಾಡಿಗೆ ಮನೆಗಳಲ್ಲಿ ನೆಲೆಸಿ ಬಹಳ ಕಷ್ಟದಿಂದ ಜೀವಿಸುತ್ತಿದ್ದಾರೆ. ಅವರಿಗೆ ನೆರವಾಗಲು ಮೀಸಲು ಜಮೀನನ್ನು ಹಂಚಿಕೆ ಮಾಡಬೇಕು ಎಂದರು.

ಮನಪಾ ವ್ಯಾಪ್ತಿಯಲ್ಲಿ 127 ಲೋಡರ್ಸ್, ಒಳಚರಂಡಿ ವಿಭಾಗದ 100 ಮಂದಿ ಮತ್ತು 157 ವಾಹನ ಚಾಲಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಗುತ್ತಿಗೆ ರದ್ದು ಮಾಡಿ, ಇವರನ್ನು ಶೀಘ್ರ ನೇರ ಪಾವತಿಯಡಿ ತರಬೇಕು. ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಮಾತ್ರ ಗುತ್ತಿಗೆ ಸೇವೆಯಡಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಉಳಿದ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ನೇರಪಾವತಿ ವ್ಯವಸ್ಥೆಯಿದೆ ಎಂದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಸಫಾಯಿ ಕರ್ಮಚಾರಿ ಸಮಿತಿಯಲ್ಲಿ ಪೌರ ಕಾರ್ಮಿಕರು ಅಲ್ಲದವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಇದರಿಂದ ಪೌರ ಕಾರ್ಮಿಕರಿಗೆ ಅನ್ಯಾಯವಾಗಿದ್ದು, ಶೀಘ್ರ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ನೇರ ಪಾವತಿ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್, ವಾಹನ ಚಾಲಕರು, ಒಳಚರಂಡಿ ವಿಭಾಗದ ಪೌರಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು, ಗೃಹಭಾಗ್ಯ ಯೋಜನೆಯಡಿ ಎಲ್ಲ ಬಡವರಿಗೆ ವಸತಿ ಸೌಕರ್ಯ, ನಗದು ರಹಿತ ಆರೋಗ್ಯ ವಿಮೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಆನಂದ, ಮಾಜಿ ಅಧ್ಯಕ್ಷ ಲಕ್ಷ್ಮಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಶೇಖರ, ಕೃಷ್ಣ, ಶಶಿಕಲಾ ಮತ್ತು ವಾಸು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News