‘ನಮ್ಮ ಕೃಷಿ ಭೂಮಿ ಯಾವುದೇ ಕಾರಣಕ್ಕೂ ಕೊಡುವುದಿಲ್ಲ’: ಯಕೆಟಿಎಲ್ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ
ಮಂಗಳೂರು, ಅ. 28: ಉಡುಪಿ ಕಾಸರಗೋಡು 400 ಕೆವಿ ಟ್ರಾನ್ಸ್‌ಮಿಷನ್ ಲೈನ್ (ಯುಕೆಟಿಎಲ್) ಯೋಜನೆಗಾಗಿ ಈಗ ಗುರುತಿಸಲಾದ ಪ್ರದೇಶದ ರೈತರು ತಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ. ಇದಕ್ಕಾಗಿ ಶೀಘ್ರದಲ್ಲೇ ಜನ ಜಾಗೃತಿಗಾಗಿ ಪಾದಯಾತ್ರೆ, ಪ್ರಭಾತ ಫೇರಿ, ರ್ಯಾಲಿಯನ್ನು ನಡೆಸುವುದಾಗಿ ಯೋಜನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ಹೇಳಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಪ್ರಮುಖರಾದ ಚಂದ್ರಹಾಸ ಶೆಟ್ಟಿ, ನಾಲ್ಕೂವೆರ ವರ್ಷಗಳ ಹಿಂದೆ ವಿಟ್ಲ ಭಾಗದ ರೈತರು ಮೊದಲ ಬಾರಿಗೆ ಈ ಯೋಜನೆ ವಿರೋಧಿಸಿ ಹೋರಾಟ ಸಮಿತಿ ರಚಿಸಿಕೊಂಡು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಕರ್ನಾಟಕ ರಾಜ್ಯ ರೈತ ಸಂಘವೂ ಸೇರಿದಂತೆ ಉಭಯ ಜಿಲ್ಲೆಗಳ ರೈತ ಪರ ಸಂಘಟನೆಗಳು, ಪರಿಸರ ಪ್ರೇಮಿ ಹಾಗೂ ಸಾಮಾಜಿಕ ನ್ಯಾಯ ಪರ ಸಂಘಟನೆಗಳ ಪ್ರತಿನಿಧಿಗಳು ಸೇರಿಕೊಂಡು ಹೋರಾಟ ಸಮಿತಿಗಳ ಒಕ್ಕೂಟ ರಚಿಸಿಕೊಂಡು ಹೋರಾಟಕ್ಕಿಳಿದಿರುವುದಾಗಿ ಹೇಳಿದರು.
ವಿದ್ಯುತ್ ಸಂಪರ್ಕ ಜಾಲಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಈಗಾಗಲೇ ಅಭಿವೃದ್ಧಿಯನು ಕೊಂಡಿರುವ ಕೃಷಿ ವಲಯವಾಗಿರುವ ಪ್ರದೇಶಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಬೇರೆ ರಾಜ್ಯ, ಜಿಲ್ಲೆಗಳಿಗಾಗಿ ಮಾಡಲಾಗುತ್ತಿರುವ ಯೋಜನೆಗಾಗಿ ನಮ್ಮ ಫಲವತ್ತಾದ ಕೃಷಿಭೂಮಿಯನ್ನು ನಾಶ ಪಡಿಸುವುದನ್ನು ನಾವು ವಿರೋಧಿಸುತ್ತಿದ್ದೇವೆ. ಈ ಯೋನಜೆಯಿಂದ ಉಭಯ ಜಿಲ್ಲೆಗಳ 1150 ಎಕರೆ ಭೂಭಾಗ ಈ ಯೋಜನೆಗೆ ಬಲಿಯಾಗುತ್ತದೆ. ಇದರ ಜತೆಗೆ ಸುಮಾರು 2300 ಎಕರೆಯಷ್ಟು ಜಮೀನು ವಿವಿಧ ಕಟ್ಟಡ, ಮನೆ, ಮನೆ, ಶೆಡ್, ಗೋದಾಮು, ಹಟ್ಟಿ, ಮಠ ಮಂದಿರ ಏನನ್ನೂ ಕಟ್ಟಲಾಗದೆ, ವಾಸಿಸಲೂ ಅಯೋಗ್ಯವಾಗಲಿದೆ. ಅಂದಾಜು 165,000ದಷ್ಟು ಅಡಿಕೆ ಮರಗಳು, 7800 ತೆಂಗಿನ ಮರ, 120000 ಕರಿಮೆಣಸಿನ ಬಳ್ಳಿ, 4500 ರಬ್ಬರ್ ಮರಗಳು, 2500 ಹಲಸು, 5000 ಸಾಗುವಾನಿ, 2800 ಮಾವು, 4500ರಷ್ಟು ಬಲಿತ ಕಾಡು ಮರಗಳು ಸೇರಿದಂತೆ ಸಾವಿರಾರು ಸಂಖ್ಯೆಯ ಹಣ್ಣು ಹಂಪಲಿನ ಗಿಡಗಳು ನಾಶವಾಗಲಿವೆ. ಇದಲ್ಲದೆ, 328 ಮನೆಗಲು, 26 ದೈವಸ್ಥಾನಗಳು, 8 ಮಸೀದಿ, 16 ದೇವಸ್ಥಾನ, 14 ಶಾಲೆಗಳು, 3 ಸೆಮಿನರಿಗಳು ಈ ಕಾರಿಡಾರ್‌ನ ಸಂಪರ್ಕಕ್ಕೆ ಬರಲಿವೆ ಎಂದವರು ವಿವರಿಸಿದರು.
ನಾಲ್ಕೂವರೆ ವರ್ಷಗಳಲ್ಲಿ ಶೇ. 1ರಷ್ಟು ಯೋಜನಾ ಸಂತ್ರಸ್ತರಿಗೂ ಕ್ರಮಬದ್ಧ ನೋಟೀಸು ನೀಡಿಲ್ಲ. ಕಾರಿಡಾರ್‌ನಲ್ಲಿ ಬರುವ ಶೇ. 70ರಷ್ಟು ಜನರಿಗೆ ಈ ಯೋಜನೆಯ ಬಗ್ಗೆ ಅರಿವೇ ಇಲ್ಲ. ಯೋಜನೆ ಅನುಷ್ಠಾನವಾಗಬೇಕಾದರೆ ಶೇ. 85ರಷ್ಟು ಬಾಧಿತ ಕ್ಷೇತ್ರದ ಜನರ ಸಮ್ಮತಿ ಅಗತ್ಯ. ಆದರೆ ಇಲ್ಲಿ ಯೋಜನೆಗೆ ಶೇ. 97ರಷ್ಟು ಜನರ ವಿರೋಧವಿದೆ. ಗ್ರಾ.ಪಂ.ಗಳ ವಿಶೇಷ ಗ್ರಾಮ ಸಭೆಗಳಲ್ಲಿಯೂ ಈ ಯೋಜನೆ ವಿರುದ್ಧ ಠರಾವು ಮಂಜೂರಾಗಿದೆ. ಹಾಗಾಗಿ ಈ ಯೋಜನೆಯನ್ನು ಸಮಿತಿ ವಿರೋಧಿಸುತ್ತಿದ್ದು, ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡದಿದ್ದರೆ ಅವರ ಕಚೇರಿ ಹಾಗೂ ನಿವಾಸಗಳ ಎದುರು ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಶ್ರೀಧರ ಶೆಟ್ಟಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ರಾಜೀವ ಗೌಡ, ದಯಾನನಂದ ಶೆಟ್ಟಿ, ಉದಯ ಕುಮರ್‌ಿ ಜೇಐನ್, ಅಲ್ಫೋನ್ಸ್ ಡಿಸೋಜಾ ಉಪಸ್ಥಿತರಿದ್ದರು.