ಹೊಟೇಲ್‌ನಲ್ಲಿ ಯುವತಿಗೆ ಹಲ್ಲೆ ಪ್ರಕರಣ| ಶೀಘ್ರ ಕಿಡಿಗೇಡಿಗಳ ಬಂಧನ: ಕಮಿಷನರ್ ಅನುಪಮ್ ಅಗರ್ವಾಲ್

Update: 2024-08-30 16:09 GMT

ಮಂಗಳೂರು: ನಗರದ ಹೊಟೇಲ್‌ವೊಂದರಲ್ಲಿ ಯುವತಿಗೆ ಹಲ್ಲೆಗೈದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಶೀಘ್ರ ಕಿಡಿಗೇಡಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಪಾರ್ಕಿಂಗ್ ವಿಷಯದಲ್ಲಿ ಆ.25ರಂದು ಈ ಘಟನೆ ನಡೆದಿದೆ. ಕಿಡಿಗೇಡಿಗಳು ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿ‌ ದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

ಸಿಸಿ ಕ್ಯಾಮೆರಾ ಪರಿಶೀಲಿಸಿ ತನಿಖೆ ಮಾಡುತ್ತಿದ್ದೇವೆ. ಅಷ್ಟೇ ಅಲ್ಲ ಯುವತಿಯ ಕಪಾಳಕ್ಕೆ ಹೊಡೆದವರು ಮತ್ತು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದವರನ್ನು ಬಂಧಿಸುತ್ತೇವೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

ನಗರದ ಲಾಲ್‌ಬಾಗ್‌ನ ಹೋಟೆಲ್‌ವೊಂದರ ಬಳಿ ಯುವಕರ ತಂಡವೊಂದು ತನ್ನ ಮೇಲೆ ಹಲ್ಲೆ ಮಾಡಿದೆ. ಈ ಬಗ್ಗೆ ಬರ್ಕೆ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಆಗಿಲ್ಲ ಎಂದು ಯುವತಿ ಆರೋಪಿಸಿದ್ದಲ್ಲದೆ ತನ್ನ ಮಾತಿನ ವೀಡಿಯೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದು ವೈರಲ್ ಕೂಡಾ ಆಗಿತ್ತು.

ಆ.25ರ ರಾತ್ರಿ 9:30ಕ್ಕೆ ಮನೆಯವರೊಂದಿಗೆ ಹೋಟೆಲ್‌ಗೆ ಹೋಗಿದ್ದು, ರಾತ್ರಿ 11ಕ್ಕೆ ಊಟ ಮುಗಿಸಿ ಬಿಲ್ ಕೊಟ್ಟಿದ್ದೆವು. ವಾಶ್‌ರೂಂಗೆ ಹೋದಾಗ ಅಲ್ಲಿ ಮಹಿಳಾ ಶೌಚಾಲಯದಲ್ಲಿ ಪುರುಷನೊಬ್ಬನಿದ್ದ. ಅಲ್ಲಿಂದ ಹೊರ ಬಂದಾಗ ಅಲ್ಲಿದ್ದ ಇತರ ಇಬ್ಬರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಕ್ಯಾಶ್ ಕೌಂಟರ್ ತಿಳಿಸಿದ ಬಳಿಕ ಕ್ಷಮೆ ಕೇಳಿ ಸಮಸ್ಯೆಯನ್ನು ಮುಗಿಸಲಾಗಿತ್ತು.

ಬಳಿಕ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಕಾರ್‌ನ ಹಿಂದೆ ಬೈಕ್ ಪಾರ್ಕ್ ಮಾಡಲಾಗಿತ್ತು. ಕಾರನ್ನು ರಿವರ್ಸ್ ತೆಗೆಯುವಾಗ ಬೈಕ್‌ನಲ್ಲಿದ್ದಾತ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಆವಾಗ ತನ್ನ ಜತೆಗಿದ್ದವರು ಆತನನ್ನು ಪ್ರಶ್ನಿಸಿದ್ದಾರೆ. ಹಾಗೇ ಮಾತಿಗೆ ಮಾತು ಬೆಳೆದಿದ್ದು, ಅದರಲ್ಲಿ ಒಬ್ಬ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ತಾನು ಪ್ರಶ್ನಿಸಿದಾಗ ಹಿಂದಕ್ಕೆ ದೂಡಿದ್ದಾನೆ. ಹಲ್ಲೆ ಮಾಡಿದ್ದನ್ನು ಪ್ರಶ್ನಿಸಿದಾಗ ಮತ್ತೊಬ್ಬ ಕೂಡಾ ಬಂದು ಹೊಡೆದಿದ್ದು, ಇನ್ನೊಬ್ಬಾತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ವೀಡಿಯೋದಲ್ಲಿ ಆರೋಪಿಸಿದ್ದರೆ.

ಘಟನೆಗೆ ಸಂಬಂಧಿಸಿ ಪಾಂಡೇಶ್ವರ ಮಹಿಳಾ ಠಾಣೆಗೆ ಹೋದಾಗ ಬರ್ಕೆ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿ ದ್ದಾರೆ. ಅದರಂತೆ ತಾನು ಬರ್ಕೆ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ಕೂಡಾ ದಾಖಲಾಗಿದೆ ಎಂದು ಯುವತಿ ವೀಡಿಯೋದಲ್ಲಿ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News