ಬಜ್ಪೆ: ಅಕ್ರಮ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ದಾಳಿ; ಎರಡು ಟಿಪ್ಪರ್ ಸಹಿತ 15 ದೋಣಿ ವಶಕ್ಕೆ

Update: 2023-09-23 14:13 GMT

ಬಜ್ಪೆ, ಸೆ.23: ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರ (ಪಲ್ಗುಣಿ) ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಬಜ್ಪೆ ಪೊಲೀಸರು ಎರಡು ಟಿಪ್ಪರ್ ಲಾರಿಗಳ‌ ಸಹಿತ 15 ದೋಣಿಗಳನ್ನು ವಶಕ್ಕೆ ಪಡೆಸಿದ್ದಾರೆ.

ಗುರುಪುರ ಫಲ್ಗುಣಿ ನದಿಯ ತಟದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಪೊಲೀಸರು ಸೆ.23ರಂದು ಬೆಳಗ್ಗೆ 4ಗಂಟೆಯ ಸುಮಾರಿಗೆ ಈ ಕಾರ್ಯಾಚರಣೆ‌ ಕೈಗೊಂಡಿದ್ದಾರೆ.

ಕಾರ್ಯಾಚರಣೆಯ ವೇಳೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ತಲಾ 5ಲಕ್ಷ ರೂ. ಮೌಲ್ಯದ ಎರಡು ಟಿಪ್ಪರ್ ಲಾರಿಗಳು, ತಲಾ 50 ಸಾವಿರ ರೂ. ಮೌಲ್ಯದ 15 ದೋಣಿಗಳು ಹಾಗೂ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ಸೊತ್ತು ಗಳು ಸೇರಿ ಒಟ್ಟು 17.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ ಗೋಯೆಲ್ ಅವರ ನೇತ್ರತ್ವದಲ್ಲಿ ಬಜ್ಪೆ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News