ಬಂಟ್ವಾಳ : ನಾಪತ್ತೆಯಾಗಿದ್ದ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೇಣೂರಿನಲ್ಲಿ ಪತ್ತೆ
ಬಂಟ್ವಾಳ : ಅಮ್ಟಾಡಿ ಗ್ರಾಮ ಪಂಚಾಯತ್ ಗ್ರೇಡ್ 1 ಕಾರ್ಯದರ್ಶಿ ಮಂಗಳವಾರ ನಾಪತ್ತೆಯಾಗಿದ್ದು, ಬುಧವಾರ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಆಚಾರ್ಯ ಎಂಬವರು ಮಂಗಳವಾರ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ವಂದನಾ ಅವರ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ಅವರ ಮೊಬೈಲ್ ಲೊಕೇಶನ್ ಹಾಕಿದಾಗ ವಾಲ್ಪಾಡಿ ಕೊಯಕುಡೆ ಚಡಾವ್ ತೋರಿಸುತ್ತಿದ್ದು ಪೊಲೀಸರು ಮತ್ತು ಸಂಬಂಧಿಕರು ಹುಡುಕಾಟ ನಡೆಸಿದಾಗ ಅಲ್ಲಿ ರಸ್ತೆ ಬದಿ ಅವರ ಮೊಬೈಲ್ ಪತ್ತೆಯಾಗಿತ್ತು.
ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜೆಯಲ್ಲಿದ್ದು ಹೆಚ್ಚವರಿಯಾಗಿ ಆ ಹುದ್ದೆಯನ್ನು ಇವರೇ ನಿರ್ವಹಿಸುತ್ತಿದ್ದು ಎರಡು ಹುದ್ದೆಯನ್ನು ನಿಭಾಯಿಸಲು ಸಾಧ್ಯವಾಗದೆ ನೊಂದುಕೊಂಡಿದ್ದರು ಎನ್ನಲಾಗಿದೆ. ಸೆ.12 ರಂದು ಮಧ್ಯಾಹ್ನ ಮನೆಯಿಂದ ಹೊರಟವರು ಕಚೇರಿಗೆ ಬಾರದೆ ಅತ್ತ ಮನೆಗೂ ತೆರಳದೆ ನಾಪತ್ತೆಯಾಗಿದ್ದರು.
ಲಕ್ಷ್ಮಿನಾರಾಯಣ ಆಚಾರ್ಯ ಬುಧವಾರ ವೇಣೂರಿನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.