ಬಂಟ್ವಾಳ: ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪೊಲೀಸ್ ಸಿಬ್ಬಂದಿಯ ಎರಡು ಮೊಬೈಲ್ ಕಳವು

Update: 2023-09-21 13:40 GMT

ಬಂಟ್ವಾಳ : ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಪೊಲೀಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ಸಂಚಾರಿ ಠಾಣೆ ಸಿಬ್ಬಂದಿ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದ ಕಾರಣ ಸೆ.17 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರು ಸೆ.19 ರಂದು ಜನರಲ್ ವಾರ್ಡ್ ಗೆ ಸ್ಥಳಾಂತರವಾಗಿದ್ದರು. ಅವರು ಮಲಗಿದ್ದ ವೇಳೆ ಇವರ ಮಂಚದ ಪಕ್ಕದ ಟೇಬಲ್‌ ಮೇಲೆ ಇರಿಸಲಾಗಿದ್ದ ಎರಡು ಮೊಬೈಲ್ ಫೋನ್ ಕಳವು ಮಾಡಲಾಗಿದೆ.

ಮೊಬೈಲ್ ಕಳ್ಳತನ ಮಾಡಿದ ಮತ್ತು ಯುವಕನೋರ್ವ ಆಸ್ಪತ್ರೆಗೆ ಬಂದು ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.

ಆತ ಕಳೆದ ವಾರ ಐಸಿಯು ಘಟಕದೊಳಗೆ ನುಗ್ಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೋರ್ವರಲ್ಲಿ "ಒಮ್ಮೆ ಫೋನ್ ಕೊಡಿ ಅಜ್ಜಿ ಅರ್ಜೆಂಟಾಗಿ ಫೋನ್ ಮಾಡಲು ಇದೆ" ಎಂದು ಹೇಳಿ ಮೊಬೈಲ್ ಪಡೆದುಕೊಂಡು ಹೋದ ವ್ಯಕ್ತಿ ಮೊಬೈಲ್ ನೊಂದಿಗೆ ನಾಪತ್ತೆಯಾಗಿದ್ದ. ಅದೇ ವ್ಯಕ್ತಿ ಮತ್ತೆ ಪೊಲೀಸ್ ಸಿಬ್ಬಂದಿಯ ಫೋನ್ ಕಳ್ಳತನ ಮಾಡಿದ್ದು ಸಿ.ಸಿ.ಕ್ಯಾಮರಾದ ಮೂಲಕ ತಿಳಿದುಬಂದಿದೆ.

ಇದೀಗ ಆಸ್ಪತ್ರೆಯಲ್ಲಿ ಈತನ ಫೋಟೋ ಅಂಟಿಸಲಾಗಿದ್ದು, ಮೊಬೈಲ್ ಕಳ್ಳತನ ಮಾಡಿದ ಆರೋಪಿಯ ಚಹರೆ ಗಮ‌ನಿಸಿದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News