ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು
ಬೆಳ್ತಂಗಡಿ: ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಪಿಲಿಕಲ ರಸ್ತೆ ವ್ಯಾಪಕವಾಗಿ ಬಿರುಕು ಬಿಟ್ಟು ಜನ, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಆ ಪ್ರದೇಶಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯ ಜನರು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆಯಿತು.
ದ.ಕ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿಂದ ಭಾರೀ ಮಳೆಯಾಗಿ ತಾಲೂಕಿನಾದ್ಯಂತ ವ್ಯಾಪಕವಾಗಿ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಸವಣಾಲು ಗ್ರಾಮದ ಪಿಲಿಕಲ ಪ್ರದೇಶ ಸೇರಿದಂತೆ ವಿವಿಧೆಡೆ ದ.ಕ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು. ಆದರೆ ಶಾಸಕ ಹರೀಶ್ ಪೂಂಜ ಅವರು ಮಾತ್ರ ಇಲ್ಲಿಗೆ ಭೇಟಿ ನೀಡಿರಲಿಲ್ಲ. ಬಳಿಕ ಈ ಪ್ರದೇಶದ ಜನರನ್ನು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಕ್ಕೆ ಹೋಗಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದರೂ ಅಲ್ಲಿನ ಜನರು ಸಾಕುಪ್ರಾಣಿಗಳನ್ನು ಬಿಟ್ಟು ನಾವು ಕಾಳಜಿ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು. ಬಳಿಕ ಅಧಿಕಾರಿಗಳು ಪರ್ಯಾಯ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಗಳು ಆಗಮಿಸಿ ಅಂದಾಜು ಪಟ್ಟಿ ತಯಾರಿಸಿದ್ದರು.
ಇಷ್ಟೇಲ್ಲ ಆದ ಬಳಿಕ ಇಂದು ಬಿಜೆಪಿ ಪದಾಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯರ ಒಂದು ಗುಂಪು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಹರೀಶ್ ಪೂಂಜ ಪರವಾಗಿ ಮಾತನಾಡಿದವರು ಹಾಗೂ ಇತರರ ನಡುವೆಯೂ ಮಾತಿನ ಚಕಮಕಿ ನಡೆದಿದೆ.
ನಮ್ಮ ಸಂಕಷ್ಟಕ್ಕೆ ಸ್ಪಂದಿಸದೆ ಈಗ ಬಂದು ಏನು ಪ್ರಯೋಜನ ? ಎಂದು ಸ್ಥಳೀಯರು ಪ್ರಶ್ನಿಸಿದರು. ಎರಡೂ ಗುಂಪಿನ ನಡುವೆ ಏಕವಚನದಲ್ಲೂ ಮಾತುಕತೆ ನಡೆಯಿತು. ಈ ಸಂದರ್ಭ ಶಾಸಕ ಹರೀಶ್ ಪೂಂಜಾ ಅವರು ಕೆಟ್ಟ ಪದಗಳನ್ನು ಉಪಯೋಗಿಸಿದ ಘಟನೆ ಕೂಡ ನಡೆದಿದೆ ಎನ್ನಲಾಗಿದ್ದು ಅದರ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶಾಸಕ ಹರೀಶ್ ಪೂಂಜ ಅವರು ಇಲ್ಲಿನ ರಸ್ತೆ ದುರಸ್ತಿಗೆ ಐದು ಲಕ್ಷ ರೂ. ಅನುದಾನವನ್ನು ಒದಗಿಸುವುದಾಗಿಯೂ ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ನಡೆಸುವುದಾಗಿಯೂ ತಿಳಿಸಿ ಅಲ್ಲಿಂದ ತೆರಳಿದ್ದಾರೆ.