ಸುಳ್ಳನ್ನೇ ಬಂಡವಾಳವಾಗಿಸಿಕೊಂಡ ಬಿಜೆಪಿಯನ್ನು ಸೋಲಿಸಬೇಕು: ಅಭಯಚಂದ್ರ ಜೈನ್
ಮಂಗಳೂರು, ಮಾ. 30: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವು ಕಳೆದ 33 ವರ್ಷಗಳಿಂದ ಕಾಂಗ್ರೆಸ್ನಿಂದ ಕೈ ತಪ್ಪಿ ಹೋಗಿದ್ದು, ಅದನ್ನು ಮತ್ತೆ ತನ್ನ ತೆಕ್ಕೆಗೆ ಪಡೆಯುವ ಕಾರ್ಯ ಕಾರ್ಯಕರ್ತರು ಮಾಡಬೇಕಾಗಿದೆ. ಸುಳ್ಳೇ ಬಂಡವಾಳದ ಬಿಜೆಪಿಯನ್ನು ಸೋಲಿಸಬೇಕಿದೆ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಗೆ ದಕ್ಷ ಹಾಗೂ ಪ್ರಾಮಾಣಿಕ ಹೊಸ ಮುಖವಾಗಿ ಪದ್ಮರಾಜ್ ಆರ್. ಅವರಿಗೆ ಪಕ್ಷ ಟಿಕೆಟ್ ನೀಡಿದ್ದು, ಹೊಸದಿಲ್ಲಿಯಲ್ಲಿ ಜನರ ಪರವಾಗಿ ಧ್ವನಿ ಎತ್ತುವಲ್ಲಿ ಅವರು ಗೆಲ್ಲಬೇಕು ಎಂದರು.
ಬಿಜೆಪಿಯ ನಂ.1 ಸದಸ್ಯರಿಗೆ ಪಕ್ಷ ಟಿಕೆಟ್ ನೀಡಿಲ್ಲ. ಬರೇ ಪ್ರಚಾರದ ಗಿಮಿಕ್ ನಲ್ಲೇ ಬಿಜೆಪಿಯವರು ಮತ ಪಡೆಯುತ್ತಿದ್ದರು. ಕಾಂಗ್ರೆಸ್ ತನ್ನ ಆಡಳಿತಾವಧಿಯುದ್ದಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಮಂಗಳೂರಿನಲ್ಲಿ 15 ವರ್ಷ ಎಂಪಿಯಾಗಿದ್ದವರು ಯಾವ ಕೈಗಾರಿಕೆಗೆ ಮಂಗಳೂರಿಗೆ ತಂದಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು, ಉಳುವವನೇ ಹೊಲದೊಡೆಯ ಮಾಡಿ ಇಂದು ಸಾಮಾನ್ಯ ಕೃಷಿಕನೂ ಧನಿಕನಾಗುವಲ್ಲಿ ಕಾಂಗ್ರೆಸ್ ಕೊಡುಗೆ ಅಪಾರ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಕೈಗಾರಿಕೆಗಳು, ಹೆದ್ದಾರಿ ಯೋಜನೆಗಳನ್ನು ಆರಂಭಿಸಿದ್ದು ಕಾಂಗ್ರೆಸ್ ಸಂಸದರು. ಇಂದಿರಾಗಾಂಧಿಯವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರೆ, ಕೇಂದ್ರ ಸಚಿವರಾಗಿ ಜನಾರ್ದನ ಪೂಜಾರಿ ಸಾಮಾನ್ಯರಿಗೂ ಆರ್ಥಿಕ ಸೌಲಭ್ಯ ದೊರಕುವಂತೆ ಮಾಡಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸಿಟಿಇ ಮೂಲಕ ಬಡವರ ಮಕ್ಕಳೂ ಇಂಜಿನಿಯರಿಂಗ್, ಮೆಡಿಕಲ್ ಶಿಕ್ಷಣ ಪಡೆಯುವಂತೆ ಮಾಡಿದರು. ಬಿಜೆಪಿಯವರು ಶಂಕುಸ್ಥಾನೆಯನ್ನೂ ಪ್ರಚಾರಕ್ಕಾಗಿ ಮಾಡುತ್ತಾರೆ. ಆಸ್ಕರ್ ಫೆರ್ನಾಂಡಿಸ್ರವರು ತಮ್ಮ ಕನಸಿನಂತೆ ರಾ. ಹೆದ್ದಾರಿ ಕಾಮಗಾರಿಗಳನ್ನು ಮಂಜೂರು ಮಾಡಿಸಿದ್ದರೆ, ಅದನ್ನು ಪೂರ್ತಿ ಮಾಡಲು ಬಿಜೆಪಿಯಿಂದ ಆಗಿಲ್ಲ. ಆದರೂ ಅದನ್ನೂ ತಮ್ಮ ಸಾಧನೆ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರಿಗೆ ಅಭಿವೃದ್ಧಿ ಬೇಡ. ಜನರ ಮತೀಯ ಭಾವನೆಗಳನ್ನು ಕೆರಳಿಸಿ ಮತ ಪಡೆಯುತ್ತಾರೆ. ದೇಸಿ ಬಗ್ಗೆ ಭಾಷಣ ಮಾಡುವ ಪ್ರಧಾನಿ ವಿದೇಶಿ ನಿರ್ಮಿತ ದುಬಾರಿ ಕಾರುಗಳನ್ನು ಬಳಸುತ್ತಾರೆ. ಟೋಲ್, ಜಿಎಸ್ಟಿ ಮೂಲಕ ಜನರ ತೆರಿಗೆ ಹಣವನ್ನು ಅವರ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸಿದ ಅಭಯಚಂದ್ರ ಜೈನ್, ಈ ಬಾರಿ ಕಾರ್ಯಕರ್ತರಲ್ಲಿ ಹುರುಪು ಹೆಚ್ಚಿದೆ. ದ.ಕ. ಸೇರಿದಂತೆ ಈ ಬಾರಿ ಕರಾವಳಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲಿದ್ದೇವೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ನಾವು ಎಲ್ಲಾ ತಯಾರಿ ಮಾಡಿದ್ದೇವೆ. ಗೆದ್ದೇ ಗೆಲ್ಲುತ್ತೇವೆ. ರಾಜ್ಯದಲ್ಲಿ ಈ ಹಿಂದಿನ ಅವಧಿಯಲ್ಲಿ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಈಬಾರಿ ಗ್ಯಾರಂಟಿ ಯೋಜನೆ ಮೂಲಕ ಜನರ ಮನ ಗೆದ್ದಿದೆ. ಹಿಂದೆಲ್ಲಾ ನಾವು ಬಿಜೆಪಿಯ ದುರಾಡಳಿತ ಕಾಂಗ್ರೆಸ್ನ ಕೊಡುಗೆ, ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದ ಕಾರಣ ಸೋಲಿಗೆ ಕಾರಣವಾಗಿದ್ದು, ಈ ಬಾರಿ ನಾನೂ ಸಕ್ರಿಯ ಕಾರ್ಯಕರ್ತನಾಗಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದುಡಿಯುತ್ತೇನೆ ಎಂದು ಅಭಯಚಂದ್ರ ಜೈನ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಶುಭೋದಯ ಆಳ್ವ, ನೀರಜ್ ಪಾಲ್, ಟಿ.ಕೆ. ಸುಧೀರ್, ನಝೀರ್ ಬಜಾಲ್, ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.