ದಲಿತ ದೌರ್ಜನ್ಯ ಕಾಯ್ದೆ: ನೆಕ್ಕಿಲಾಡಿ ಗ್ರಾ.ಪಂ.ಅಧ್ಯಕ್ಷೆ, ಉಪಾಧ್ಯಕ್ಷ ಸೇರಿ 13 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2023-10-20 14:02 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ, 4 ಮಂದಿ ಸದಸ್ಯರು ಸೇರಿದಂತೆ ಒಟ್ಟು 13 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಅ.18ರಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ತಾನು ಹಾಗೂ ಗ್ರಾ.ಪಂ. ಸದಸ್ಯ ರಮೇಶ್ ನಾಯ್ಕ ಅವರೊಂದಿಗೆ 34 ನೆಕ್ಕಿಲಾಡಿ ಗ್ರಾಮದ ಬೀತಲಪ್ಪು ನೂತನ ಅಂಗನವಾಡಿ ಪರಿಶೀಲನೆಗೆ ಹೋಗಿದ್ದು, ಬೀತಲಪ್ಪು ವಿವಾದಿತ ಸ್ಥಳದ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ ಅಲ್ಲಿ ಅಳತೆ ಪ್ರಕ್ರಿಯೆಯ ಸಿದ್ಧತೆ ಕಂಡು ಬಂದಿದ್ದು, ಇದಕ್ಕೆ ನಾನು ಹಾಗೂ ರಮೇಶ ನಾಯ್ಕ ವಿವಾದಿತ ವಿಚಾರವನ್ನು ವಿಮರ್ಶೆ ನಡೆಸಿ, ಆ ಜಾಗದ ಕೇಸು ಇರುವುದರಿಂದ ಮತ್ತು ಅಂಬೇಡ್ಕರ್ ಭವನಕ್ಕೆ ಸಾರ್ವಜನಿಕರ ಕೋರಿಕೆಯಂತೆ ಜಾಗ ಮೀಸಲಿರಿಸುವ ಪ್ರಸ್ತಾಪ ಇರುವುದರಿಂದ ಪಂಚಾಯತ್‍ಗೆ ಮಾಹಿತಿ ನೀಡದೆ ಇರುವುದರಿಂದ ಆಕ್ಷೇಪ ಹಾಕಿರುತ್ತೇವೆ. ಅದರಂತೆ ಸರ್ವೇಯರ್ ಅಳತೆಯನ್ನು ನಿಲ್ಲಿಸಿ ಅಲ್ಲಿಂದ ತೆರಳಿರುತ್ತಾರೆ. ಬಳಿಕ ನಾನು ಹಾಗೂ ರಮೇಶ ನಾಯ್ಕ ಬೀತಲಪ್ಪು ನೂತನ ಅಂಗನವಾಡಿ ಪರಿಶೀಲನೆಗೆ ಹೋಗಿ ಬರುವಾಗ ಬೀತಲಪ್ಪುವಿನ ಅಶೋಕ್ ನಾಯಕ್ ಹಾಗೂ ಗಣೇಶ್ ನಾಯಕ್ ಎಂಬವರು ನಮ್ಮಿಬ್ಬರನ್ನು ತಡೆದು ನಿಲ್ಲಿಸಿ ಅವ್ಯಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಶೋಕ್ ನಾಯಕ್ ಹಾಗೂ ಗಣೇಶ್ ನಾಯಕ್ ಎಂಬವರ ವಿರುದ್ಧ ದಲಿತ ದೌರ್ಜನ್ಯದಡಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ ಬೀತಲಪ್ಪುವಿನ ಶಂಭು ಮುಗೇರ ಎಂಬವರ ಪುತ್ರ ಉಮೇಶ ಎಸ್. ಎಂಬವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಅ.19ರಂದು ರಾತ್ರಿ ತನ್ನ ಮನೆಗೆ ಅಕ್ರಮವಾಗಿ ಪ್ರವೇಶಿಸಿದ 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್, ರಮೇಶ್, ವಿಜಯಕುಮಾರ್, ಸ್ವಪ್ನ, ಉಪಾಧ್ಯಕ್ಷ ಹರೀಶ್ ಡಿ., ಅಧ್ಯಕ್ಷೆ ಸುಜಾತ ರೈ, ಸ್ಥಳೀಯರಾದ ಮಲ್ಲೇಶ್, ರೇಖಾ, ಅಶ್ವಿನ್, ವೀಣಾ, ಶಕುಂತಳಾ ಎಂಬವರು ನನಗೆ ಅವ್ಯಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೆ, ನೀನು ತಾರಾ ನಾಯಕ್‍ಗೆ ಬೆಂಬಲ ನೀಡುತ್ತೀಯ ಎಂದು ನನ್ನ ಮೈ ಮೇಲೆ ಕೈ ಹಾಕಿ ದೂಡಿ, ನನ್ನ ಪತ್ನಿಯ ಮೇಲೆ ದೌರ್ಜನ್ಯ ಮಾಡಲು ಬಂದಿದ್ದು, ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳಾದ 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್, ರಮೇಶ್, ವಿಜಯಕುಮಾರ್, ಸ್ವಪ್ನ, ಉಪಾಧ್ಯಕ್ಷ ಹರೀಶ್ ಡಿ., ಅಧ್ಯಕ್ಷೆ ಸುಜಾತ ರೈ, ಸ್ಥಳೀಯರಾದ ಮಲ್ಲೇಶ್, ರೇಖಾ, ಅಶ್ವಿನ್, ವೀಣಾ, ಶಕುಂತಳಾ ಎಂಬವರ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News