ಕೆಪಿಟಿ, ನಂತೂರು ಜಂಕ್ಷನ್‌ ನಲ್ಲಿ ಇಲೆವೇಟೆಡ್ ಹೈವೇ ಗೆ ಒತ್ತಾಯ

Update: 2023-12-12 09:33 GMT

ಮಂಗಳೂರು, ಡಿ.12: ರಾಷ್ಟ್ರೀಯ ಹೆದ್ದಾರಿ- 66ರ ಕೆಪಿಟಿ ಮತ್ತು ನಂತೂರು ಜಂಕ್ಷನ್‌ನಲ್ಲಿ ವಾಹನ ಮೇಲ್ಸೇತುವೆ(ವೆಹಿಕ್ಯುಲರ್ ಓವರ್‌ಪಾಸ್-ವಿಒಪಿ) ಬದಲು ಎತ್ತರಿಸಿದ ಹೆದ್ದಾರಿ (ಇಲೆವೇಟೆಡ್ ಹೈವೆ) ನಿರ್ಮಿಸಬೇಕು ಎಂದು ಸೊಸೈಟಿ ಫಾರ್ ಫಾರೆಸ್ಟ್, ಎನ್ವಿರಾನ್‌ಮೆಂಟ್ ಆ್ಯಂಡ್ ಕ್ಲೈಮೆಟ್ ಚೇಂಜ್ ಸಂಸ್ಥೆ ಒತ್ತಾಯಿಸಿದೆ.

ಕೆಪಿಟಿಯಲ್ಲಿ ವಿಒಪಿ ನಿರ್ಮಾಣಕ್ಕೆ ಈಗಾಗಲೇ ಕಾರ್ಯಾದೇಶವಾಗಿದೆ. ಅಪಘಾತಗಳನ್ನು ತಪ್ಪಿಸಲು (ಬ್ಲ್ಯಾಕ್ಸ್ ಸ್ಪಾಟ್ ಸರಿಪಡಿಸಲು) ಮತ್ತು ವಾಹನ ದಟ್ಟಣೆಯನ್ನು ಸರಿಪಡಿಸಲು ವಿಒಪಿ ನಿರ್ಮಿಸುತ್ತಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೇಳುತ್ತಿದ್ದಾರೆ. ಆದರೆ ವಿಒಪಿ ನಿರ್ಮಿಸಿದರೆ ಬ್ಲ್ಯಾಕ್ ಸ್ಪಾಟ್‌ಗಳು ಹೋಗುವುದಿಲ್ಲ, ಅಪಘಾತಗಳು ಹೆಚ್ಚಾಗಲಿವೆ. ಅದರ ಬದಲು ಕುಂಟಿಕಾನದಿಂದ ಪಂಪ್‌ವೆಲ್‌ವರೆಗೆ ಎತ್ತರಿಸಿದ ಹೆದ್ದಾರಿ ನಿರ್ಮಿಸಬೇಕು ಎಂದು ಸೊಸೈಟಿಯ ಕಾರ್ಯದರ್ಶಿ ಬೆನೆಡಿಕ್ಟ್ ಸಿ ಫೆರ್ನಾಂಡಿಸ್ ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.

ಈ ವ್ಯವಸ್ಥೆಯಿಂದ ನಗರ ಮತ್ತು ಹೆದ್ದಾರಿಯ ವಾಹನಗಳ ಸಂಚಾರ ಪ್ರತ್ಯೇಕವಾಗಿ ಸಂಚಾರ ಸುಗಮವಾಗಲಿದೆ. ಈಗಿನ ಯೋಜನೆ ಪ್ರಕಾರ ಮೊದಲ ಹಂತದಲ್ಲಿ ಕೆಪಿಟಿ ಬಳಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಕೆಪಿಟಿಯಿಂದ ಪದವು ಶಾಲೆಯವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಮೂರೂವರೆ ಮೀಟರ್ ಆಳಕ್ಕೆ ಅಗೆಯಲಾಗುತ್ತದೆ. ಪದವು ಶಾಲೆಯ ಹತ್ತಿರ ಅಗೆಯುವುದಿಲ್ಲ. ಅದು ದಿಬ್ಪದ ಹಾಗೆ ಉಳಿಯಲಿದೆ. ಸುರತ್ಕಲ್‌ನಿಂದ ಬರುವ ಬುಲೆಟ್ ಟ್ಯಾಂಕರ್, ಎನ್‌ಎಂಪಿಟಿ ವಾಹನಗಳು ಸೇರಿದಂತೆ ಬೆಂಗಳೂರು ಕಡೆಗೆ ತೆರಳುವ ವಾಹನಗಳು ಪದವು ಶಾಲೆಯ ಬಳಿ ಎಡಭಾಗಕ್ಕೆ ತಿರುಗಿ ಕುಲಶೇಖರ ಮೂಲಕ ಹೋಗಬೇಕು. ಎರಡನೇ ಹಂತದಲ್ಲಿ ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಈ ಕಾಮಗಾರಿ ಪ್ರಕಾರ ಬೆಂಗಳೂರಿನಿಂದ ಬರುವ ವಾಹನಗಳು ಮೇಲ್ಸೇತುವೆ ಮೇಲೆ ಬಂದು ನಂತೂರಿನಲ್ಲಿ ಬಲಭಾಗಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ- 66ರನ್ನು ಸಂಪರ್ಕಿಸಬೇಕು. ಇದರಿಂದಾಗಿ ಬ್ಲ್ಯಾಕ್ ಸ್ಪಾಟ್‌ಗಳನ್ನು ಸರಿಪಡಿಸಿದಂತೆ ಆಗುವುದಿಲ್ಲ. ಸಮಸ್ಯೆಗೆ ಪರಿಹಾರವೂ ಸಿಗುವುದಿಲ್ಲ. ಮುಖ್ಯವಾಗಿ ಪದವು ಶಾಲೆಯ ಎದುರು ಮೂರು ರಸ್ತೆಗಳು ಸೇರಿ ಅಲ್ಲಿ ಬ್ಲ್ಯಾಕ್‌ಸ್ಪಾಟ್ ನಿರ್ಮಾಣವಾಗಿ ಹೆಚ್ಚಿನ ಸಮಸ್ಯೆಯಾಗಲಿದೆ ಎಂದು ಫೆರ್ನಾಂಡಿಸ್ ಹೇಳಿದರು.

ಸೊಸೈಟಿ ಸದಸ್ಯ ಭುವನ್ ದೇವಾಡಿಗ ಅವರು ಮಾತನಾಡಿ, ವಿಒಪಿ ಬದಲು ಇಲೆವೇಟೆಡ್ ಹೈವೆ ನಿರ್ಮಾಣಕ್ಕೆ ಈಗಾಗಲೇ ಹೆದ್ದಾರಿ ಪ್ರಾಧಿಕಾರದವರಿಗೆ ಬೇಡಿಕೆ ಸಲ್ಲಿಸಿದ್ದೇವೆ. ಆದರೆ ಪ್ರಾಧಿಕಾರದವರು ಹಣಕಾಸಿನ ಕೊರತೆಯನ್ನು ಮುಂದಿಡುತ್ತಿದ್ದಾರೆ. ಬೆಂಗಳೂರು ಅನಂತರ ಮಂಗಳೂರು ಅಧಿಕ ಆದಾಯ ನೀಡುವ ನಗರವಾಗಿದೆ. ಹಾಗಾಗಿ ಇಲ್ಲಿನ ಕಾಮಗಾರಿಗೆ ಅಗತ್ಯ ಹಣ ವಿನಿಯೋಗ ಮಾಡಬೇಕು. ಈಗಿನ ಯೋಜನೆಯಡಿ ಕಾಮಗಾರಿ ನಡೆದರೆ ಮಳೆಗಾಲದಲ್ಲಿ ಪಂಪ್‌ವೆಲ್‌ನಂತೆ ರಸ್ತೆಯಲ್ಲೇ ಮಳೆನೀರು ನಿಲ್ಲುವ ಸಾಧ್ಯತೆ ಇದೆ ಎಂದು ಹೇಳಿದರು.

ಸೊಸೈಟಿಯ ಸದಸ್ಯ ದಿಲೀಪ್ ವಾಸ್ ನಾಯ್ಕ್ ಅವರು ಮಾತನಾಡಿ, ಮಂಗಳೂರು ನಗರಕ್ಕೆ ಸಂಚಾರ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಮಾಸ್ಟರ್ ಪ್ಲ್ಯಾನ್ ಇಲ್ಲ. ದೂರದೃಷ್ಟಿಯ ಯೋಜನೆ ಇಲ್ಲದೆ ಅಪಘಾತಗಳು ಕೂಡ ಹೆಚ್ಚುತ್ತಿವೆ. ಕಮಿಷನರೆಟ್ ವ್ಯಾಪ್ತಿಯಲ್ಲಿ 2017-2022ರ ಅವಧಿಯಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 845 ಮಂದಿ ಮೃತಪಟ್ಟಿದ್ದಾರೆ. 3,477 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 2,247 ಮಂದಿಗೆ ಸಾಮಾನ್ಯ ಗಾಯಗಳಾಗಿವೆ. ಇದೀಗ ವಿಒಪಿಗಳ ನಿರ್ಮಾಣದಿಂದ ಮತ್ತಷ್ಟು ಅಪಘಾತವಾಗುವ ಆತಂಕವಿದೆ ಎಂದು ಹೇಳಿದರು.

ಮರಗಳ ಸ್ಥಳಾಂತರ

ಯೋಜನೆಗಾಗಿ ಈಗಾಗಲೇ ಕೆಪಿಟಿಯಿಂದ ನಂತೂರುವರೆಗೆ ಸುಮಾರು 602 ಮರಗಳನ್ನು ಕಡಿಯಲು ಪ್ರಾಧಿಕಾರದವರು ನಿರ್ಧರಿಸಿದ್ದಾರೆ. ಇದರಲ್ಲಿ 110 ಮರಗಳನ್ನು ಈಗಾಗಲೇ ಸ್ಥಳಾಂತರಿಸಿದ್ದೇವೆ. ಉಳಿದ ಮರಗಳನ್ನು ಕೂಡ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ಪರಿಸರ ಕಾರ್ಯಕರ್ತರ ಜೀತ್‌ಮಿಲನ್ ರೋಚ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News