ದ.ಕ. ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ

Update: 2023-09-29 15:12 GMT

ಮಂಗಳೂರು, ಸೆ.29: ದ.ಕ. ಜಿಲ್ಲೆ ಸೇರಿದಂತೆ ಕರಾವಳಿಯಾದ್ಯಂತ ಮಳೆ ಮುಂದುವರಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕದಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರಿದಿದೆ. ಬೆಳಗ್ಗೆ ಎಡೆಬಿಡದೆ ಮಳೆ ಸುರಿದಿತ್ತು. ಮಧ್ಯಾಹ್ನದ ಬಳಿಕ ಆಗಾಗ ಮಳೆ ಕಾಣಿಸಿಕೊಳ್ಳುತ್ತಾ ಇತ್ತು. ದಿನವಿಡೀ ಮೋಡ ಮುಸುಕಿದ ವಾತಾವರಣ ಹಾಗೆಯೇ ಮುಂದುವರಿದಿದೆ.

ಸತತ ಮಳೆಗೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸೆಪ್ಟೆಂಬರ್ 30 ಮಧ್ಯಾಹ್ನದವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರವಿವಾರ ಮತ್ತು ಸೋಮವಾರ ಹಳದಿ ಅಲರ್ಟ್ ಘೋಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 55 ಕಿ.ಮೀ. ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಕಡಿಮೆ ವಾಯುಭಾರ ಕುಸಿತದಿಂದಾಗಿ ಈ ರೀತಿಯ ಮಳೆಯಾಗುತ್ತಿದ್ದು, ಇದು ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ. ಇದರ ಜತೆಯಲ್ಲಿ ಗಾಳಿಯ ಒತ್ತಡ 40ರಿಂ 60 ಕಿ.ಮೀ ಸಾಗುವುದರಿಂದಲ್ಲೂ ಕೆಲವು ಭಾಗದಲ್ಲಿ ಉತ್ತಮ ಮಳೆಯ ನಿರೀಕ್ಷೆ ಮಾಡಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಮಂಗಳೂರು ಭಾಗದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ ತನಕ ಸಾಧಾರಣದಿಂದ ಉತ್ತಮ ಮಳೆಯಾದರೆ ಸಂಜೆ ಮೋಡ ಕವಿದ ವಾತಾವರಣದ ಜತೆಯಲ್ಲಿ ಮತ್ತೇ ಮಳೆ ಸುರಿದಿದೆ. ಜಿಲ್ಲೆಯ ಬಹುತೇಕ ಕಡೆಯಲ್ಲಿ ಇದೇ ರೀತಿಯಲ್ಲಿ ಮಳೆ ಯಾಗಿದ್ದು, ಅಕ್ಟೋಬರ್ ಮೊದಲ ವಾರದ ತನಕ ಮಳೆಯನ್ನು ನಿರೀಕ್ಷೆ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೀನುಗಾರರಿಗೆ ಮುನ್ನೆಚ್ಚರಿಕೆ: ತಿರುವನಂತಪುರಂನ ಭಾರತೀಯ ಹವಾಮಾನ ಇಲಾಖೆಯು ನೀಡಿದ ಹವಾಮಾನ ಮುನ್ಸೂಚನೆಯಂತೆ ಸೆ.29ರಿಂದ ಅಕ್ಟೋಬರ್ 2ರ ವರೆಗೆ ಅರಬ್ಬಿ ಸಮುದ್ರದಲ್ಲಿ ನಿಮ್ನ ಒತ್ತಡ ಉಂಟಾಗಿದ್ದು, ಚಂಡ ಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೀನುಗಾರರು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸುಳ್ಯದಲ್ಲಿ ಗರಿಷ್ಠ ಮಳೆ: ಶುಕ್ರವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಸುಳ್ಯದಲ್ಲಿ ಗರಿಷ್ಠ 44.3 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಸರಾಸರಿ ಮಳೆ 31.5 ಮಿ.ಮೀ. ಆಗಿದೆ. ಮಂಗಳೂರು 18.4 ಮಿ.ಮೀ, ಬಂಟ್ವಾಳ 26.9 ಮಿ.ಮೀ, ಬೆಳ್ತಂಗಡಿ 43.6 ಮಿ.ಮೀ, ಪುತ್ತೂರು 22 ಮಿ.ಮೀ, ಕಡಬ 33.6 ಮಿ.ಮೀ. ಮಳೆ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News