ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ: ಸಚಿವ ಎಚ್.ಕೆ ಪಾಟೀಲ್
ಹುಬ್ಬಳ್ಳಿ; ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಹುಟ್ಟಲ್ಲ. ಇದು ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಅಸಂವಿಧಾನಿಕವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತವಾದ ರಾಜ್ಯಪಾಲರ ಅನ್ಯಾಯದ ಕ್ರಮ. ಮೈಸೂರಲ್ಲಿ ಸೇರಿದ ಜನ ನೋಡಿಯಾದ್ರೂ ರಾಜ್ಯಪಾಲರು ತಮ್ಮ ಕ್ರಮ ಬದಲಾಯಿಸಿಕೊಳ್ಳಬೇಕಿತ್ತು ಎಂದರು.
ಇಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದ್ದು, ಎಲ್ಲಾ ಮಂತ್ರಿ, ಶಾಸಕರು ಸಿದ್ದರಾಮಯ್ಯ ಅವರಿಗೆ ಬೆಂಬಲ ಕೊಡ್ತಾ ಇದ್ದೇವೆ. ಪ್ರತಿ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಸಿದ್ದು ಬಿಜೆಪಿ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರನ್ನ ಗುರಿ ಮಾಡ್ತಾ ಇದ್ದಾರೆ. ಜೂನ್ 26ಕ್ಕೆ ದೂರು ನೀಡಿದ ಕೂಡಲೇ ನಾವು ಉತ್ತರ ಕೊಟ್ಟಿದ್ದೇವೆ. ಅದೇ ರಾತ್ರಿ ತರಾತುರಿಯಲ್ಲಿ ಶೋಕಾಸ್ ನೋಟಿಸ್ ಹೊರಡಿಸಿದ್ದಾರೆ ಎಂದು ಆರೋಪಿಸಿದರು.
22ಕ್ಕೆ ಶಾಸಕಾಂಗ ಹಾಗೂ ಕ್ಯಾಬಿನೆಟ್ ಸಭೆ ಇದೆ. ಈ ಮಧ್ಯೆ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಯಂತಹ ಕೇಂದ್ರ ಸಚಿವರು ಸರ್ಕಾರ ಉಳಿಯೋದಿಲ್ಲ ಅಂತಿದ್ದಾರೆ. ಇವರೇನು ಭವಿಷ್ಯ ಹೇಳ್ತಾರಾ? ಎಂದು ಪ್ರಶ್ನಿಸಿದರು.
ಐದು ಗ್ಯಾರೆಂಟಿ ಮೂಲಕ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾವು ಹೆಜ್ಜೆ ಇಡ್ತಾ ಇದ್ದೇವೆ. ಟ್ಯಾಕ್ಸ್ ನಮ್ಮ ಹಕ್ಕು ಅಂತ ನಮ್ಮ ಮುಖ್ಯಮಂತ್ರಿ ದಿಟ್ಟತನದಿಂದ ಹೇಳ್ತಾರೆ. ಒಕ್ಕೂಟ ರಾಜ್ಯ ವ್ಯವಸ್ಥೆಯಲ್ಲಿ ನಮ್ಮ ಹಕ್ಕು ಚಲಾಯಿಸಬಾರದಾ? ಸಿದ್ದರಾಮಯ್ಯ ರಾಜೀನಾಮೆ ಕೊಡೊ ಪ್ರಶ್ನೆಯೇ ಹುಟ್ಟಲ್ಲ, ಇದು ಬಿಜೆಪಿ ಬಿಜೆಪಿ ನಾಯಕರ ಕುತಂತ್ರ. ಸಿದ್ದರಾಮಯ್ಯ ವಿರೋಧಿಗಳು ಮಾಡಿರುವ ಷಡ್ಯಂತ್ರ ನಾವು ಕಾನೂನಾತ್ಮಕ ಹೋರಾಟ ಮಾಡ್ತೇವೆ ಎಂದು ಹೇಳಿದರು.