'ಗುರುಪುರ ಕಂಬಳೋತ್ಸವ'ಕ್ಕೆ ಅದ್ದೂರಿ ಚಾಲನೆ

ಗುರುಪುರ: ಮೂಳೂರು - ಅಡ್ಡೂರು ಜೋಡುಕೆರ ಕಂಬಳ ಸಮಿತಿ, ಗುರುಪುರ ಇದರ ಆಶ್ರಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಆಯೋಜಿಸಲಾಗಿರುವ ಎರಡನೇ ವರ್ಷದ ಹೊನಲು ಬೆಳಕಿನ 'ಗುರುಪುರ ಕಂಬಳೋತ್ಸವ' ಶನಿವಾರ ಮಾಣಿಬೆಟ್ಟು ಗುತ್ತಿನ ಗದ್ದೆಯಲ್ಲಿ ಶನಿವಾರ ಚಾಲನೆ ದೊರೆಯಿತು.

'ಗುರುಪುರ ಕಂಬಳೋತ್ಸವ'ವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಯಾವುದೇ ಕೆಲಸ ಮಾಡುವುದಿದ್ದರೂ ಯೋಗ -ಭಾಗ್ಯ ಬೇಕು ಎನ್ನುವ ಹಿರಿಯರ ನುಡಿಯಂತೆ ಇನಾಯತ್ ಅಲಿ ಅವರು ಗುರುಪುರದಲ್ಲಿ ಅದ್ದೂರಿಯಾಗಿ ಕಂಬಳ ನಡೆಸುವ ಯೋಗ ಭಾಗ್ಯ ಪಡೆದುಕೊಂಡಿದ್ದಾರೆ. ಅವರನ್ನು ದೇವರು ಸೌಹಾರ್ದ ಕಂಬಳ ಆಯೋಜನೆಗೆ ಕರುಣಿಸಿದ್ದಾನೆ. ಇದರ ಫಲವಾಗಿ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ಗುರುಪುರ ಕಂಬಳೋತ್ಸವ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಳೂರು - ಅಡ್ಡೂರು ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಕಳೆದ ವರ್ಷ ಕಂಬಳ ಆಚರಣೆಗೆ ಮುಂದಾದಾಗ ಚುನಾವಣೆ ಘೋಷಣೆಯಾದ ಕಾರಣ ಪ್ರಚಾರ ಮಾಡಲು ಸಾಧ್ಯವಾಗದೆ ಇದ್ದರೂ ನಮ್ಮ ಯೋಜನೆಗೂ ಮೀರಿ ಯಶಸ್ವಿಯಾಗಿತ್ತು. ಹಾಗಾಗಿ ಈ ಬಾರಿ ಎರಡನೇ ವರ್ಷದ ಕಂಬಳವನ್ನು ಕಂಬಳೋತ್ಸವವಾಗಿ ಅದ್ದೂರಿ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಹರಿನಾರಾಣ ದಾಸ ಅಸ್ರಣ್ಣ ದೀಪ ಪ್ರಜ್ವಲನೆ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಮೂಳೂರು ಮುಂಡಿತ್ತಾಯ ದೈವಸ್ಥಾನದ ತಂತ್ರಿ ಜಿ.ಟಿ.ವಾಸುದೆವ ಭಟ್, ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ಬೊಳ್ಮಾರಗುತ್ತು ಶಶಿಧರ್ ಭಟ್, ದೋಣಿಂಜೆ ಗುತ್ತು ಪ್ರಕಾಶ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ, ಧಾರ್ಮಿಕ ಪರಿಷತ್ ನ ಪದವು ಮೇಗಿನಮನೆ ಉಮೇಶ್ ರೈ, ಆರ್. ಕೆ. ಪೃಥ್ವಿರಾಜ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮನಪಾ ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಯಕ್ಷಗಾನ ಅಕಾಡಮಿಯ ಸದಸ್ಯ ನಮೃತಾ, ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್ ಪೂಜಾರಿ, ತನಿಯಪ್ಪ ಪೂಜಾರಿ, ಬೂಬ ಪೂಜಾರಿ, ಸದಾನಂದ ಚೌಟ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಮೀರ್ ಕಾಟಿಪಳ್ಳ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಮೊದಲಾದವರು ಉಪಸ್ಥಿತರಿದ್ದರು.
ವಿಜೇತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.