ದುರಾಸೆಯೇ ಭ್ರಷ್ಟಾಚಾರದ ಮೂಲ, ದುರಾಸೆಗೆ ಯಾವುದೇ ಔಷಧಿ ಇಲ್ಲ: ನ್ಯಾ| ಸಂತೋಷ್ ಹೆಗ್ಡೆ

Update: 2023-09-11 17:50 GMT

ಬಂಟ್ವಾಳ : ದುರಾಸೆಯೇ ಭ್ರಷ್ಟಾಚಾರದ ಮೂಲವಾಗಿದ್ದು ದುರಾಸೆಗೆ ಯಾವುದೇ ಔಷಧಿ ಇಲ್ಲ ಎಂದು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕ ಹಾಗೂ ತುಂಬೆ ಪದವಿಪೂರ್ವ ಕಾಲೇಜು ಇದರ ಆಶ್ರಯದಲ್ಲಿ ಸೋಮವಾರ ಕಾಲೇಜು ಸಭಾಂಗಣದಲ್ಲಿ "ಭ್ರಷ್ಟಾಚಾರ ಮುಕ್ತ ಸಮಾಜ, ಯುವ ಜನತೆಯ ಪಾತ್ರ" ಎಂಬ ವಿಷಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುವ ಈಗಿನ ಸಮಾಜದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ, ಕ್ರಿಮಿನಲ್ ಪ್ರಕರಣ ದಲ್ಲಿ ಜೈಲುಪಾಲಾದ ವ್ಯಕ್ತಿ ಬಿಡುಗಡೆಗೂಂಡಾಗ ಸಂಭ್ರಮದ ಸ್ವಾಗತ ನೀಡುವಂತಹ ಸಮಾಜದಲ್ಲಿ ನಾವಿದ್ದೇವೆ, ವ್ಯವಸ್ಥೆ ಹಾಗೂ ದುರಾಸೆಗಳು ಇದೇ ರೀತಿ ಮುಂದುವರಿಯುತ್ತಾ ಹೋದರೆ ಮುಂದಿನ ದಿನಗಳು ಏನಾಗಬಹುದು ..? ಎಂದು ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.

ಹಿರಿಯರು ಕಟ್ಟಿದ ಮೌಲ್ಯ, ಮಾನವೀಯ ಸಿದ್ಧಾಂತಗಳು ಮರೆಯಾಗುತ್ತಿದ್ದು ಶಾಂತಿ, ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ. ಭ್ರಷ್ಟಾಚಾರ ಪ್ರತಿಯೋರ್ವ ನಾಗರಿಕನ ಸಮಸ್ಯೆಯಾಗಿದ್ದು ಇದನ್ನು ಸಮರ್ಥವಾಗಿ ಎದುರಿಸಬೇಕು ಎಂದ ಅವರು ನ್ಯಾಯಾಲಯದ ವ್ಯವಸ್ಥೆಯ ದುರ್ಬಲಕೆಯಾಗುತ್ತಿದ್ದು ಈಗ ಇರುವ ನಾಲ್ಕು ಹಂತದ ನ್ಯಾಯಾಂಗ ವ್ಯವಸ್ಥೆಯು ಎರಡು ಹಂತಕ್ಕೆ ಸೀಮಿತಗೊಂಡಾಗ ಭ್ರಷ್ಟಾಚಾರ ಮತ್ತು ಕಾನೂನು ದುರ್ಬಲಕೆಗೆ ಕಡಿವಾಣದ ಜೊತೆಗೆ ತ್ವರಿತ ನ್ಯಾಯದಾನ ಸಾಧ್ಯ ಎಂದವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಮೀಯತುಲ್ ಫಲಾಹ್ ಸಂಸ್ಥೆಯ ಎನ್.ಆರ್.ಸಿ.ಸಿ. ಮಾಜಿ ಅಮೀರ್ ಶಾಹುಲ್ ಹಮೀದ್ ದಮಾಮ್, ಜಿಲ್ಲಾಧ್ಯಕ್ಷ ಕೆ.ಕೆ.ಸಾಹುಲ್ ಹಮೀದ್ ಮಾತನಾಡಿದರು. ಅಜೀವ ಸದಸ್ಯರುಗಳಾದ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ನೆಹರು ನಗರ, ಆನಿಯಾ ದರ್ಬಾರ್ ಹಂಝ ಬಸ್ತಿಕೋಡಿ, ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹಾಗೂ ಜಮೀಯತುಲ್ ಫಲಾಹ್ ಸಂಸ್ಥೆಯ ಎನ್.ಆರ್.ಸಿ.ಸಿ. ಮಾಜಿ ಅಮೀರ್ ಶಾಹುಲ್ ಹಮೀದ್ ದಮ್ಮಾಮ್ ಅವರನ್ನು ಸನ್ಮಾನಿಸಲಾಯಿತು.

ಕಾಲೇಜು ವಿದ್ಯಾರ್ಥಿಗಳಾದ ಅಮಿತ್ ಶುಕ್ಲ, ಸಂಜನಾ, ಸೀಮಾ, ಸಬೀನಾ ಭಾನು, ಹಾಸಿಂ, ಸೃಜನ್ ಹಾಗೂ ಶಾಮಿಲ್ ಸಂತೋಷ್ ಹೆಗ್ಡೆ ಅವರೊಂದಿಗೆ ಸಂವಾದ ನಡೆಸಿದರು.

ಜಮೀಯತುಲ್ ಫಲಾಹ್ ಸಂಸ್ಥೆಯ ಮಾಜಿ ಜಿಲ್ಲಾಧ್ಯಕ್ಷ ಹಾಜಿ ಮೊಹಮ್ಮದ್ ಹನೀಫ್ ಗೋಳ್ತಮಜಲು, ತುಂಬೆ ಬಿ.ಎ.ಶಿಕ್ಷಣ ಸಂಸ್ಥೆಯ ಮೆನೇಜರ್ ಮುಹಮ್ಮದ್ ಕಬೀರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನಿಸಾರ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಸುವರ್ಣ ಮೊದಲಾದವರು ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ವಿಟ್ಲ ಪ್ರಸ್ತಾವನೆ ಗೈದರು. ತುಂಬೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗಂಗಾಧರ ಆಳ್ವ ಕೆ.ಎನ್.ಸ್ವಾಗತಿಸಿ, ಹಕೀಂ ಕಲಾಯಿ ವಂದಿಸಿದರು. ಅಹ್ಮದ್ ಮುಸ್ತಫಾ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.










 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News