ಸುಳ್ಯ ತಾಲೂಕಿನಾದ್ಯಂತ ಭಾರೀ ಮಳೆ
ಸುಳ್ಯ: ತಾಲೂಕಿನಾದ್ಯಂತ ಶನಿವಾರ ಸಂಜೆ ಭಾರೀ ಮಳೆಯಾಗಿದೆ. ಸಂಜೆ 6 ಗಂಟೆಯ ಬಳಿಕ ಧಾರಾಕಾರ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ ಸುಮಾರು 3 ಗಂಟೆಗೂ ಅಧಿಕ ಮಳೆಯಾಗಿದೆ.
ಸುಳ್ಯ ನಗರದಲ್ಲಿ 112 ಮಿಲಿ ಮೀಟರ್ ಮಳೆ ಸುರಿದಿದೆ. ಚೊಕ್ಕಾಡಿಯಲ್ಲಿ 125 ಮಿ.ಮಿ.ಮಳೆಯಾಗಿದೆ. ಬಾಳಿಲದಲ್ಲಿ 105 ಮಿ.ಮಿ.ಮಳೆ ಸುರಿದಿದೆ.
ಸುಳ್ಯ ತಾಲೂಕಿನ ಗುತ್ತಿಗಾರು, ದೇವಚಳ್ಳ, ಎಲಿಮಲೆ, ಮಕರ್ಂಜ, ವಳಲಂಬೆ, ಸುಳ್ಯ ನಗರ, ಜಾಲ್ಸೂರು, ಮಂಡೆಕೋಲು, ಬೆಳ್ಳಾರೆ, ಐವರ್ನಾಡು, ಕೊಲ್ಲಮೊಗ್ರು, ಅರಂತೋಡು ಹೀಗೆ ಎಲ್ಲಾ ಕಡೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆಯಾಗಿದೆ.
ತಡೆಗೋಡೆ ಕುಸಿತ:
ಸುಳ್ಯ ನಗರದಲ್ಲಿ ಸುರಿದ ಮಳೆಗೆ ಸುಳ್ಯ ತಾಲೂಕು ಪಂಚಾಯಿತಿ ಹತ್ತಿರದಲ್ಲಿರು ಪತ್ರಕರ್ತ ಗಂಗಾಧರ ಮಟ್ಟಿಯವರ ಮನೆಯ ತಡೆಗೋಡೆ ಸಂಪೂರ್ಣ ಕುಸಿತಗೊಂಡು ಅಪಾರ ನಷ್ಟ ಸಂಭವಿಸಿದೆ. ಅಲ್ಲದೇ ಚೊಕ್ಕಾಡಿಯ ಅಜ್ಜನಗದ್ದೆಯಲ್ಲಿ ಕುಕ್ಕುಜಡ್ಕ ಕ್ರಾಸ್ ಬಳಿ ಮರ ಬಿದ್ದು ವಿದ್ಯುತ್ ಕಂಬ ಮುರಿದು ಬಿದ್ದಿದೆ.
ಪೆರುವಾಜೆ ಗ್ರಾಮದ ಚೆನ್ನಾವರ ಕುಂಡಡ್ಕದಲ್ಲಿ ಶನಿವಾರ ಸುರಿದ ಭಾರೀ ಮಳೆಗೆ ಕಿಂಡಿ ಅಣೆಕಟ್ಟಿನ ಬದಿಯಲ್ಲಿರುವ ಕೃಷಿ ತೋಟ ಕೊಚ್ಚಿಹೋಗಿದೆ. ಅಣೆಕಟ್ಟಿಗೆ ನೀರು ಸಂಗ್ರಹಕ್ಕಾಗಿ ಹಲಗೆ ಹಾಕಿದ ಕಾರಣ ಮಳೆ ನೀರು ತುಂಬಿ ಇನ್ನೊಂದು ಬದಿಯಿಂದ ಕೊಚ್ಚಿ ಹೋಗಿದ್ದು ಪುತ್ತು ಚೆನ್ನಾವರ ಎಂಬವರ ತೋಟದ 100ಕ್ಕೂ ಮಿಕ್ಕಿ ಅಡಿಕೆ ಗಿಡ, ಮರಗಳು ಬಿದ್ದು ಕೊಚ್ಚಿ ಹೋಗಿದ್ದು ಅಪಾರ ನಷ್ಟ ಸಂಭವಿಸಿದೆ.