ಅಕ್ರಮ ಮರಳು ದಂಧೆ | ಉಡುಪಿಯ ಎಸ್ಪಿಗೆ ಸಾಧ್ಯವಾಗಿದ್ದು, ಮಂಗಳೂರಿನ ಪೊಲೀಸ್ ಕಮೀಷನರ್ ಗೆ ಯಾಕೆ ಸಾಧ್ಯವಾಗುತ್ತಿಲ್ಲ? : ಮುನೀರ್ ಕಾಟಿಪಳ್ಳ ಪ್ರಶ್ನೆ

Update: 2025-02-17 21:46 IST
ಅಕ್ರಮ ಮರಳು ದಂಧೆ | ಉಡುಪಿಯ ಎಸ್ಪಿಗೆ ಸಾಧ್ಯವಾಗಿದ್ದು, ಮಂಗಳೂರಿನ ಪೊಲೀಸ್ ಕಮೀಷನರ್ ಗೆ ಯಾಕೆ ಸಾಧ್ಯವಾಗುತ್ತಿಲ್ಲ? : ಮುನೀರ್ ಕಾಟಿಪಳ್ಳ ಪ್ರಶ್ನೆ

ಮುನೀರ್ ಕಾಟಿಪಳ್ಳ

  • whatsapp icon

ಮಂಗಳೂರು: ಮಂಗಳೂರಿನಲ್ಲಿ ಉತ್ತುಂಗ ತಲುಪಿರುವ, ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆಯ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡದ್ದನ್ನು ಕಂಡು ಅಚ್ಚರಿಯಾಯ್ತು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.

ಸಚಿವರು ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವಾಗ ಮಂಗಳೂರು ನಗರ ಪೊಲೀಸ್ ಕಮೀಷನರ್, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಚಿವರಿಗೆ ಸಾಥ್ ನೀಡಿ ತಾವೂ ಒಂದಿಷ್ಟು ಆರೋಪಗಳನ್ನು ಹೊರಿಸಿದರು. ಒಟ್ಟು ಅನಿಷ್ಟಕ್ಕೆಲ್ಲ ಶನೀಶ್ವರನೆ ಕಾರಣ ಎಂಬಂತೆ ಎಲ್ಲರೂ ಸೇರಿ, ಗಣಿ ಇಲಾಖೆಯ ಅಧಿಕಾರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತಮ್ಮ ಕರ್ತವ್ಯ ಲೋಪವನ್ನು ಮರೆಮಾಚಲು ಯತ್ನಿಸಿದರು ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು.

ಉಸ್ತುವಾರಿ ಸಚಿವರು ನಿಜಕ್ಕೂ, ಅಕ್ರಮ ಮರಳುಗಾರಿಕೆ ದಂಧೆಕೋರರ ಅಟ್ಟಹಾಸದಿಂದ ಆಕ್ರೋಶಿತರಾಗಿದ್ದರೆ, ಸಭೆಯಲ್ಲಿ ತನ್ನ ಜೊತಗೆ ವೇದಿಕೆಯ ಮೇಲಿದ್ದ ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಹೊಣೆಯಾಗಿಸಬೇಕಿತ್ತು, ಪ್ರಶ್ನಿಸಬೇಕಿತ್ತೆ ಹೊರತು, ಅವರೊಂದಿಗೆ ಸೇರಿ ವೇದಿಕೆಯ ಕೆಳಗಿದ್ದ ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನಲ್ಲ. ಮಹಿಳಾ ಅಧಿಕಾರಿ ನೀಡಿದ ಸಮಜಾಯಿಷಿಯು ಸರಿ ಇತ್ತು. ಪೊಲೀಸ್ ಇಲಾಖೆಯ ಸಹಕಾರ ಸಿಗುತ್ತಿಲ್ಲ, ತಮ್ಮಲ್ಲಿ ಸಿಬ್ದಂದಿ ಕೊರತೆ ಇದೆ, ನಾವು ಅಕ್ರಮ ಮರಳುಗಾರಿಕೆಯ ಸ್ಥಳಕ್ಕೆ ತೆರಳಿ ಗಂಟೆಗಳ ಕಾಲ ಕಾದರೂ, ಪೊಲೀಸರು ಸ್ಥಳಕ್ಕೆ ಬರುವುದಿಲ್ಲ ಎಂಬ ಅವರ ಆರೋಪ ನೂರಕ್ಕೆ ನೂರು ಸರಿ ಇದೆ ಎಂಬುದು ಅಕ್ರಮ ಮರಳು ದಂಧೆಯ ವಿರುಧ್ದ ದ್ವನಿ ಎತ್ತುತ್ತಿರುವ ಎಲ್ಲರ ಅನುಭವ. ಈ ಕುರಿತು ತಮ್ಮ ಪಕ್ಕದಲ್ಲಿ ಕೂತಿದ್ದ ಪೊಲೀಸ್ ಕಮೀಷನರ್ ಅವರನ್ನು ಸಚಿವರು ಯಾಕೆ ತರಾಟೆಗೆ ತೆಗೆದುಕೊಳ್ಳಲಿಲ್ಲ ? ಎಂದು ಪ್ರಶ್ನಿಸಿದ್ದಾರೆ.

ಪೊಲೀಸ್ ಇಲಾಖೆ ತೀರ್ಮಾನಿಸಿದರೆ ಅಕ್ರಮ ಮರಳು ಗಾರಿಕೆಯ ಒಂದು ದೋಣಿಯಾದರೂ ಮಂಗಳೂರಿನ ನದಿಗೆ ಇಳಿಯುವ ಧೈರ್ಯ ತೋರಿಸಲು ಸಾಧ್ಯವೆ?.  ಅಕ್ರಮ ಮರಳು ಸಾಗಾಟದ ಒಂದೇ ಒಂದು ಟಿಪ್ಪರ್ ಆದರೂ ರಸ್ತೆಗೆ ಇಳಿಯಲು ಸಾಧ್ಯವೆ ? ಎಂದು ಪ್ರಶ್ನಿಸಿದ ಅವರು, ಉಡುಪಿ ಜಿಲ್ಲೆಯಲ್ಲಿ ಯಾಕೆ ಅಕ್ರಮ ಮರಳುಗಾರಿಕೆ ಪೂರ್ತಿ ಸ್ಥಗಿತಗೊಂಡಿದೆ !. ಅಲ್ಲಿನ ನಿರ್ಬಂಧಿತ ಪ್ರದೇಶದಲ್ಲಿ ಒಂದು ಹಿಡಿ ಮರಳನ್ನು ತೆಗೆಯುವ ಧೈರ್ಯ ಮರಳು ಮಾಫಿಯಾಗೆ ಯಾಕೆ ಇಲ್ಲ ? ಉಡುಪಿ ಪೊಲೀಸ್ ವರಿಷ್ಟಾಧಿಕಾರಿ "ಗಣಿ ಇಲಾಖೆ ನೋಡಿಕೊಳ್ಳಲಿ" ಎಂದು ತಮ್ಮ ಜವಾಬ್ದಾರಿ ಮರೆತು ಕೂತಿದ್ದಾರೆಯೆ ? ಆಥವಾ ಇಡೀ ಪೊಲೀಸ್ ಇಲಾಖೆಯನ್ನು ಅಕ್ರಮ ಮರಳು ದಂಧೆಯ ವಿರುದ್ಧ ಸನ್ನದ್ದ ಸ್ಥಿತಿಯಲ್ಲಿ ಇರಿಸಿದ್ದಾರೆಯೆ ? ಉಡುಪಿಯ ಪೊಲೀಸ್ ವರಿಷ್ಟಾಧಿಕಾರಿಗೆ ಸಾಧ್ಯವಾಗಿದ್ದು, ಮಂಗಳೂರಿನ ಪೊಲೀಸ್ ಕಮೀಷನರ್ ಗೆ ಯಾಕೆ ಸಾಧ್ಯವಾಗುತ್ತಿಲ್ಲ ? ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಉಸ್ತುವಾರಿ ಸಚಿವರು ಮಂಗಳೂರಿನ ನದಿಗಳು, ಅದರ ಮೇಲಿನ ಸೇತುವೆಗಳು, ಅಡ್ಡಲಾಗಿರುವ ಡ್ಯಾಂಗಳ ಕುರಿತು ಕಾಳಜಿ ಹೊಂದಿದ್ದರೆ, ಅಕ್ರಮ ಮರಳು ಗಾರಿಕೆಯ ಕುರಿತು ಆಕ್ರೋಶಿತರಾಗಿರುವುದು ನಿಜವೇ ಆಗಿದ್ದರೆ, ಅಕ್ರಮ ಮರಳುಗಾರಿಕೆಗೆ ನದಿಗೆ ಇಳಿಯುವ ಪ್ರತಿ ಒಂದು ದೋಣಿಗಳು, ಅಕ್ರಮ ಮರಳು ಸಾಗಾಟ ಮಾಡುವ ಪ್ರತಿಯೊಂದು ಟಿಪ್ಪರ್‌ಗಳು ಸಂಬಂಧ ಪಟ್ಟವರಿಗೆ ಲಂಚ ನೀಡುತ್ತಿವೆ ಎಂಬ ಸಾರ್ವಜನಿಕ ವಲಯದ ಆರೋಪಗಳ ಕುರಿತು ತನಿಖೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News