ಭಾರತೀಯ ಸಂಸ್ಕೃತಿ ಅತ್ಯುನ್ನತ :ಯು.ಟಿ.ಖಾದರ್

Update: 2024-09-08 07:57 GMT

ಮಂಗಳೂರು: ಭಾರತ ದೇಶವು ವಿವಿಧ ಸಂಸ್ಕೃತಿ, ಸಂಸ್ಕಾರಗಳ ನೆಲೆವೀಡಾಗಿದ್ದು, ಹಬ್ಬ -ಉತ್ಸವಗಳು ಪರಸ್ಪರ ಬಾಂಧವ್ಯ ಬೆಳೆಸಲು ಪೂರಕವಾಗಿದೆ ಎಂದು ವಿಧಾನ ಸಭೆಯ ಅಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ.

ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆಯುತ್ತಿರುವ 18ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೊದಲ ದಿನದ ಧಾರ್ಮಿಕ ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮತ್ತೋರ್ವ ಮುಖ್ಯ ಅತಿಥಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ಶೀಘ್ರದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಭವ್ಯ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಸಮಗ್ರ ಸಮಾಜಕ್ಕೆ ನೂತನ ಕಟ್ಟಡದ ಪ್ರಯೋಜನ ಸಿಗಲಿದೆ ಎಂದರು.

ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬಂಟರ ನೂತನ ಕಟ್ಟಡಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಅಪೂರ್ವ ನಾಯಕತ್ವ ಗುಣ ಹೊಂದಿರುವ ಬಂಟ ಸಮಾಜ ಬಾಂಧವರು ಅತ್ಯಂತ ಶ್ರದ್ದಾ-ಭಕ್ತಿ ಯಿಂದ ಆಯೋಜಿಸುತ್ತಿರುವ ಇಲ್ಲಿನ ಗಣೇಶೋತ್ಸವ ಮಾದರಿಯಾಗಿದೆ ಎಂದರು.

ಮೇಯರ್ ಸುಧೀರ್ ಶೆಟ್ಟಿ, ಉದ್ಯಮಿ ರಘುನಾಥ ಸೋಮಯಾಜಿ, ಕಾರ್ಪೊರೇಟರ್ ಮನೋಹರ್ ಶೆಟ್ಟಿ, ಯೂನಿಯನ್ ಬ್ಯಾಂಕಿನ ಎಜಿಎಂ ವಿನೋದ್ ಅತಿಥಿಗಳಾಗಿದ್ದರು.

ಈ ಸಂದರ್ಭದಲ್ಲಿ ಖ್ಯಾತ ವೈದ್ಯ ಡಾ.ಜಯಶಂಕರ್ ಮಾರ್ಲ, ಶಂಕರ್ ಇಲೆಕ್ಟ್ರಿಕಲ್ ಮಾಲಕ ರಾಜೇಶ್ ಶೆಟ್ಟಿ ಹಾಗೂ ಇಸ್ಕಾನ್ ನ ಗುಣಕರ್ ರಾಮದಾಸ್ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ ಸಿಎ ರಾಮ ಮೋಹನ್ ರೈ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ.ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣ ಪ್ರಸಾದ್ ರೈ, ಗಣೇಶೋತ್ಸವ ಸಮಿತಿಯ ಸಂಚಾಲಕರಾದ ಅಶ್ವತ್ಥಾಮ ಹೆಗ್ಡೆ, ಮನೀಶ್ ರೈ ಹಾಗೂ ಸಂತೋಷ್ ಶೆಟ್ಟಿ ಶೆಡ್ಡೆ ಉಪಸ್ಥಿತರಿದ್ದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸಮಿತಿಯ ಸಂಚಾಲಕ ದಿವಾಕರ ಸಾಮಾನಿ ಚೇಳಾರುಗುತ್ತು ವಂದಿಸಿದರು. ಪ್ರಕಾಶ್ ಮೇಲಂಟ ಹಾಗೂ ನಯನಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News