ನ.1ರಂದು ಐಎಂಎ ಮಂಗಳೂರು ಘಟಕದಿಂದ ಕನ್ನಡ ರಾಜ್ಯೋತ್ಸವ
ಮಂಗಳೂರು, ಅ. 30: ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಘಟಕದ ವತಿಯಿಂದ ನ. 1ರಂದು ಬೆಳಿಗ್ಗೆ 10:30ಕ್ಕೆ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಡಾ. ಶಾಂತಾರಾಮ ಶೆಟ್ಟಿ ಬರೆದ ಕನ್ನಡ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಐಎಂಎ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಂಗಳೂರು ಘಟಕದ ಅಧ್ಯಕ್ಷ ಡಾ. ರಂಜನ್ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿರಿಯ ವೈದ್ಯ ಡಾ. ಶಾಂತಾರಾಮ ಶೆಟ್ಟಿ ಧ್ವಜಾರೋಹಣ ನೆರವೇರಿಸುವರು. ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಡಾ. ಶಾಂತಾರಾಮ ಶೆಟ್ಟಿಯವರ ‘ವೈದ್ಯ ವೃತ್ತಿಯ ನೀತಿ ಮತ್ತು ತತ್ವ’, ‘ಎಲುಬು ರೋಗಿಗಳು ಹಾಗೂ ಯೋಗ’, ‘ಮೇಲಾಹಳ್ಳಿ ನನ್ನೂರು ಚೆನ್ನೂರು-ನನ್ನ ಮನೆ-ಪಟೇಲರ ದೊಡ್ಡ ಮನೆ’,‘ಕ್ಯಾನ್ಸರ್ ಗಾಡ್ಸ್ ಗಿಫ್ಟ್ ಟು ಮಿ, ಹೌ ಐ ಮೇಡ್ ಇಟ್ ಎ ರಿಯಲ್ ಸ್ಟೋರಿ’ ಪುಸ್ತಕಗಳನ್ನು ಮಂಗಳೂರಿನಲ್ಲಿ ವೈದ್ಯರ ಜತೆ ಬಿಡುಗಡೆಗೊಳಿಸಿ ವಿತರಿಸಲಾಗುವುದು ಎಂದರು.
ವೈದ್ಯಕೀಯ, ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಜತೆ ನಾಡು, ನುಡಿ ನೆಲ, ಜಲ, ಪರಿಸರಕ್ಕಾಗಿ ಸಂಘಟನೆಗಳ ಮೂಲಕ ಹೋರಾಟ ಮಾಡಿ ಜನಜಾಗೃತಿ ಮೂಡಿಸಿದ ರಾಜ್ಯ ಮಟ್ಟದ ಐಎಂಎಯ ಓರ್ವ ವೈದ್ಯರಿಗೆ ಈ ವರ್ಷದಿಂದ ಐಎಂಎ ಮಂಗಳೂರು ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ನಾಡೋಜ ಜೀ ಶಂಕರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಿಟ್ಟೆ ವಿವಿಯ ವಿಶ್ರಾಂತ ಕುಲಪತಿ ಡಾ. ಸತೀಶ್ ಭಂಡಾರಿ ಶುಭ ಹಾರೈಸಲಿದ್ದಾರೆ. ಬಹುಭಾಷಾ ನಟ ಸುಮನ್ ತಲ್ವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ದ.ಕ. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶ್ರೀನಾಥ್, ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಭಾಗವಹಿಸಲಿದ್ದಾರೆ ಎಂದರು.
ಐಎಂಎ ಮಂಗಳೂರು ಕಾರ್ಯದರ್ಶಿ ಡಾ. ಅವಿನ್ ಆಳ್ವ ಮಾತನಾಡಿ, ಹಿರಿಯ ವೈದ್ಯ ಡಾ. ಎಂ. ಅಣ್ಣಯ್ಯ ಕುಲಾಲ್ ಅವರು ‘ವೈದ್ಯೋ ನಾರಾಯಣ ಹರಿ ಇದೆಲ್ಲಾ ಎಷ್ಟು ಸರಿ’ ಎಂಬ ವಿಷಯದ ಬಗ್ಗೆ ಕನ್ನಡ ಉಪನ್ಯಾಸ ನೀಡಲಿದ್ದಾರೆ. ರಕ್ತ ಸಂಬಂಧಿತ ಕಾಯಿಲೆಗಳ ತಜ್ಞ ವೈದ್ಯ ಕೆಎಂಸಿಯ ಡಾ. ಪ್ರಶಾಂತ್ ಬಿ. ಅವರು ಹಿರಿಯರಲ್ಲಿ ರಕ್ತ ಹೀನತೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.