ಕೆ.ಸಿ.ರೋಡ್: ಯುನಿವೆಫ್ ನಿಂದ ಸೀರತ್ ಸಮಾವೇಶ
ಮಂಗಳೂರು, ನ.12: ಮಾನವ ಧರ್ಮ, ದೈವಿಕ ಕಾನೂನು ಮತ್ತು ಪ್ರವಾದಿ ಮುಹಮ್ಮದ್ (ಸ.) ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕ ಇದರ ವತಿಯಿಂದ ಅಕ್ಟೋಬರ್ 6ರಿಂದ ಡಿ.22ರವರೆಗೆ ದ.ಕ. ಜಿಲ್ಲಾದ್ಯಂತ ಹಮ್ಮಿಕೊಂಡಿರುವ 'ಅರಿಯಿರಿ ಮನುಕುಲದ ಪ್ರವಾದಿಯನ್ನು' ಎಂಬ ಪ್ರವಾದಿ ಸಂದೇಶ ಅಭಿಯಾನದ ಪ್ರಯುಕ್ತ ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ಸೀರತ್ ಸಮಾವೇಶ ಜರುಗಿತು.
'ಪ್ರವಾದಿ ಮುಹಮ್ಮದ್ (ಸ.)ರ ಮಾದರಿ ಜೀವನ' ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಪ್ರಪಂಚದ ಹಲವು ಸಂಶೋಧನೆಗಳಲ್ಲಿ ಅಪಾರ ಕೊಡುಗೆ ನೀಡಿದ ಮುಸ್ಲಿಮ್ ಸಮುದಾಯ ಇಂದು ಸಮಸ್ಯೆಗಳಲ್ಲಿ ಸಿಲುಕಿ ಅವುಗಳಿಂದ ಹೊರಬರಲಾರದ ಪರಿಸ್ಥಿತಿಯಲ್ಲಿದೆ. ಪ್ರವಾದಿಯವರ 'ನಿಮ್ಮಲ್ಲಿ ಒಳಿತನ್ನು ಸಂಸ್ಥಾಪಿಸುವ ಮತ್ತು ಕೆಡುಕನ್ನು ನಿರ್ಮೂಲನೆ ಮಾಡುವ ಒಂದು ಗುಂಪು ಸದಾ ಇರಲಿ' ಎಂಬ ವಚನ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸಕ್ತವಾಗಿದೆ. ಜಾರ್ಜ್ ಬರ್ನಾರ್ಡ್ ಶಾರಂಥ ತತ್ವಜ್ಞಾನಿಗಳೇ ಆಧುನಿಕ ಜಗತ್ತಿನ ಸಮಸ್ಯೆಗಳಿಗೆ ಪ್ರವಾದಿಯ ಬೋಧನೆಗಳು ಪರಿಹಾರ ಎಂದು ಹೇಳಿರುವಾಗ ಪ್ರವಾದಿಯನ್ನು ಎಲ್ಲಾ ರಂಗಗಳಲ್ಲೂ ನನ್ನ ನಾಯಕ ಎಂದು ನಿಶ್ಯರ್ಥವಾಗಿ ಅಂಗೀಕರಿಸುವ ವರೆಗೆ ಈ ತೊಡಕುಗಳನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಟಿ.ಇಸ್ಮಾಯೀಲ್ ಮತ್ತು ಅಫೀಫ ಫ್ರೆಂಡ್ಸ್ ವೆಲ್ಫೇರ್ ಟ್ರಸ್ಟ್ ಉಚ್ಚಿಲ ಇದರ ಅಧ್ಯಕ್ಷ ಅಬೂಬಕರ್ ಸಿದ್ದೀಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಅಭಿಯಾನದ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿರಾಜ್ ಹಸನ್ ಕುಂಪಲ ಕಿರಾಅತ್ ಪಠಿಸಿದರು. ಉಮರ್ ಮುಖ್ತಾರ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಕಾರ್ಯಕ್ರಮ ಸಂಚಾಲಕ ಸಮೀರ್ ಉಚ್ಚಿಲ ಮತ್ತು ಯುನಿವೆಫ್ ದಕ್ಷಿಣ ವಲಯಾಧ್ಯಕ್ಷ ಅಡ್ವೋಕೇಟ್ ಸಿರಾಜುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.