ಇತರ ಭಾಷೆಗಳ ಸಾಹಿತ್ಯಕ್ಕಿಂತ ಕೊಂಕಣಿ ಸಾಹಿತ್ಯ ಭಿನ್ನ: ಮಮತಾ ಜಿ ಸಾಗರ್

Update: 2023-11-05 16:09 GMT

ಮಂಗಳೂರು: ಇತರ ಭಾಷೆಗಳ ಸಾಹಿತ್ಯಕ್ಕಿಂತ ಕೊಂಕಣಿ ಸಾಹಿತ್ಯ ಬಹಳಷ್ಟು ಭಿನ್ನವಾಗಿದೆ. ಒಂದೊಂದು ರಾಜ್ಯದಲ್ಲಿ ಕೊಂಕಣಿ ಒಂದೊಂದು ಲಿಪಿ, ಭಾಷೆಯಲ್ಲಿ ಮಾತನಾಡುತ್ತಾರೆ ಹಾಗೂ ಸಾಹಿತ್ಯ ಬರೆಯುತ್ತಾರೆ. ಗೋವಾ, ಕರ್ನಾಟಕ, ಕೇರಳದಲ್ಲಿ ಕೊಂಕಣಿ ಸಾಹಿತ್ಯದಲ್ಲಿ ವೈವಿಧ್ಯಮಯ ಲಿಪಿಯಿಂದ ಹಿಡಿದು ಸ್ಥಳೀಯ ಭಾಷೆಯ ಪ್ರಭಾವ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ ಎಂದು ಖ್ಯಾತ ಸಾಹಿತಿ ಮಮತಾ ಜಿ ಸಾಗರ್ ಹೇಳಿದ್ದಾರೆ.

ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ರವಿವಾರ ಅಖಿಲ ಭಾರತೀಯ ಕೊಂಕಣಿ ಪರಿಷತ್ ವತಿಯಿಂದ ಆಯೋಜಿಸ ಲಾದ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭಲ್ಲಿ ಸಾಹಿತ್ಯ ಮತ್ತು ಸಾಮಾಜಿಕ ಜವಾಬ್ದಾರಿ ಎನ್ನುವ ವಿಷಯದಲ್ಲಿ ಮಾತನಾಡಿದರು.

ಭಾರತೀಯ ಭಾಷೆಗಳಲ್ಲಿ ವೈವಿಧ್ಯತೆಗಳು ಇರುವುದರಿಂದಲ್ಲೇ ಏಕತೆ ಹುಟ್ಟಿದೆ. ವೈವಿಧ್ಯತೆ ಇಲ್ಲದೇ ಹೋಗಿದ್ದರೆ ಏಕತೆ ಇರಲು ಸಾಧ್ಯವಿಲ್ಲ. ಭಾರತೀಯ ಸಾಹಿತ್ಯ ಪರಂಪರೆ ಎನ್ನುವ ಕೊಡೆಯಲ್ಲಿ ಕೊಂಕಣಿ ಸಾಹಿತ್ಯದ ಪ್ರತಿಫಲ ಕಾಣುತ್ತೇವೆ. ಗೋವಾದ ಕೊಂಕಣಿಯಲ್ಲಿ ಅಲ್ಲಿನ ಸಂಸ್ಕೃತಿ, ಪೋರ್ಚ್‌ಗೀಸರ ಇತಿಹಾಸದ ಛಾಪು, ಪ್ರವಾಸೋದ್ಯಮದಿಂದಾಗಿ ಅಲ್ಲಿನ ಕೊಂಕಣಿ ಸಾಹಿತ್ಯ ಕೊಂಚ ಭಿನ್ನಹಾದಿಯಲ್ಲಿ ಸಾಗಿದರೆ ಕೇರಳ ಭಾಗದಲ್ಲಿ ಎಡಪಂಥೀಯ ಸಿದ್ಧಾಂತ, ಅಲ್ಲಿನ ರಾಜಕೀಯ ಬೆಳವಣಿಗೆಗಳು ಕೊಂಕಣಿಯ ಸಾಹಿತ್ಯದ ಮೇಲೆ ಪ್ರಭಾವ ಬೀರುತ್ತದೆ. ಇದೇ ರೀತಿಯಲ್ಲಿ ಕರ್ನಾಟಕದಲ್ಲಿ ಬೇರೆಯೇ ರೀತಿಯ ಪ್ರಭಾವ ಕೊಂಕಣಿ ಸಾಹಿತ್ಯದ ಮೇಲೆ ಬಿದ್ದಿದೆ ಎಂದರು.

ವೈವಿಧ್ಯತೆಯಿಂದಲ್ಲೇ ಏಕತೆ ಮೂಡುತ್ತದೆ ಎನ್ನುವುದಾದರೆ ಇಂತಹ ವೈವಿಧ್ಯತೆಯನ್ನು ಸಂಭ್ರಮಿಸಬೇಕು. ಭಾಷೆ ಎನ್ನುವುದು ಒಂದು ಸಂಸ್ಕೃತಿ, ಪರಂಪರೆಯಾಗಿರುವುದರಿಂದ ಕರ್ನಾಟಕದಲ್ಲಿ ಕನ್ನಡ ಭಾಷೆಯ ಜತೆಯಲ್ಲಿ ಕೊಂಕಣಿ ಭಾಷೆಯನ್ನು ಕೂಡ ಬೆಳೆಸಬೇಕು ಎಂದರು.

ಸಮ್ಮೇಳನದ ಅಧ್ಯಕ್ಷ ಹೇಮಾ ನಾಯ್ಕ್ ಮಾತನಾಡಿ, ಕಳೆದ ಎರಡು ದಿನಗಳಲ್ಲಿ ನಡೆದ ಕೊಂಕಣಿ ಸಮ್ಮೇಳನದಲ್ಲಿ ಯುವಜನತೆ ಜಾಸ್ತಿಯಾಗಿ ಕಾಣಿಸಿಕೊಳ್ಳುವ ಮೂಲಕ ಕೊಂಕಣಿ ಸಾಹಿತ್ಯ ಮತ್ತಷ್ಟು ಬೆಳೆಯುವ ಜತೆಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವ ನಂಬಿಕೆ ಬಲವಾಯಿತು. ಕೊಂಕಣಿ ಭಾಷೆ, ಸಾಹಿತ್ಯವನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಎಂದರು.

ಈ ಸಂದರ್ಭ ಡಾ.ಕಸ್ತೂರಿ ಮೋಹನ್ ಪೈ (ಕೊಂಕಣಿ ಶಿಕ್ಷಣ), ರೋನ್ ರೋಚ್ ಕಾಸಿಯಾ( ಕೊಂಕಣಿ ಸಾಹಿತ್ಯ) ಹಾಗೂ ಕುಮಟದ ಡಾ. ಶಿವರಾಮ ಕಾಮತ್( ಕೊಂಕಣಿ ಚಳವಳಿ)ಗಾಗಿ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮೈಕಲ್ ಡಿ ಸೋಜ, ಸಮ್ಮೇಳನದ ಉಪಾಧ್ಯಕ್ಷ ಗೋಕುಲ್ ದಾಸ್ ಪ್ರಭು, ಅಖಿಲ ಭಾರತ ಕೊಂಕಣಿ ಪರಿಷತ್‌ನ ಕಾರ್ಯಾಧ್ಯಕ್ಷ ಚೇತನ್ ಆಚಾರ್ಯ, ಖಜಾಂಚಿ ಶೀರಿಸ್ ಪೈ ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ ವಂದಿಸಿದರು. ಮನೋಜ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News