ಅಮಲು ಮುಕ್ತ ಸಮಾಜಕ್ಕೆ ಪಣತೊಡೋಣ: ಡಾ. ಅರುಣ್ ಉಳ್ಳಾಲ್

Update: 2023-08-31 16:58 GMT

ಮಂಗಳೂರು: ಧಾರ್ಮಿಕ ಕ್ರಾಂತಿಗೆ ಮುನ್ನುಡಿ ಬರೆದಿದ್ದ ನಾರಾಯಣ ಗುರುಗಳ ಕನಸಿನ ಅಮಲುಮುಕ್ತ ಸಮಾಜ ನಿರ್ಮಾಣಕ್ಕೆ ನಾವು ಪಣತೊಡಬೇಕು. ಅದಕ್ಕಾಗಿ ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ಸರಳವಾಗಿ ಹಾಗೂ ಅಮಲು ರಹಿತವಾಗಿ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ನಗರದ ಸಂತ ಆ್ಯಗ್ನೆಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಅರುಣ್ ಉಳ್ಳಾಲ್ ಹೇಳಿದರು.

ದ.ಕ.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯ ಪ್ರಯುಕ್ತ ನಗರದ ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಸಂದೇಶ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ‘ನಾರಾಯಣ ಗುರುಗಳು ಯಾವುದೇ ಜಾತಿ, ಮತ ಧರ್ಮಕ್ಕೆ ಸೀಮಿತರಾಗುವವರಲ್ಲ. ಸಾಮಾಜಿಕ ಸುಧಾರಣೆಯ ಮೂಲಕ ಅವರು ಲೋಕ ಸಂತರಾದವರು. ಗುರುಗಳು ನೀಡಿದ ಪ್ರತಿಯೊಂದು ಸಂದೇಶವೂ ನಮಗೆ ದಾರಿದೀಪವಾಗಿವೆ. ಅದರ ಮೂಲಕವೇ ಹೊಸ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

 ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ರಾತ್ರಿ ಶಾಲೆಯನ್ನೂ ಆರಂಭಿಸಿ ಸಮಾಜ ಸುಧಾರಣೆಗೆ ಪಣತೊಟ್ಟ ಗುರುಗಳು ಕೇರಳ ಹಾಗೂ ಕರಾವಳಿ ಕರ್ನಾಟಕ ಭಾಗದಲ್ಲಿ ಮಾಡಿರುವ ಕ್ರಾಂತಿ ಅಮೋಘವಾಗಿದೆ. ಮಹಿಳೆಯರಿಗೆ ಸೂಕ್ತ ಸ್ಥಾನಮಾನ, ಅಸ್ಪ್ರಶ್ಯತೆಯ ವಿರುದ್ಧ ಹೋರಾಟ, ಮದ್ಯ ಮುಕ್ತ ಸಮಾಜ ನಿರ್ಮಾಣ, ಶಿಕ್ಷಣ ಕ್ಷೇತ್ರದ ಸುಧಾರಣೆ ಎಂದೆಂದಿಗೂ ಅವರ ಅವಿಸ್ಮರಣೀಯ ಕಾರ್ಯಗಳಾಗಿವೆ ಎಂದರು.

ಮಂಗಳೂರು ಮೇಯರ್ ಜಯಾನಂದ ಅಂಚನ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಮಾತನಾಡಿದರು. ಮನಪಾ ಸದಸ್ಯ ಅನಿಲ್ ಕುಮಾರ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿದರು.

ಅಧಿಕಾರಿಗಳ ಗೈರು

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ದ.ಕ.ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದರೂ ಜಿಲ್ಲಾಧಿಕಾರಿ, ಸಿಇಒ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದು ಅಕ್ಷಮ್ಯ. ಹಿಂದುಳಿದ ಸಮಾಜ ಸುಧಾರಕರ ಕಾರ್ಯ ಕ್ರಮವನ್ನು ಜಿಲ್ಲಾಡಳಿತ ಕಾಟಾಚಾರಕ್ಕೆ ಮಾಡುವುದು ಯಾಕೆ? ಹಿಂದುಳಿದ ವರ್ಗದವರು ಹಿಂದೆ ಉಳಿಯಬೇಕು ಎಂಬುದು ಆಡಳಿತ ವ್ಯವಸ್ಥೆಯ ಧೋರಣೆಯೇ? ಎಂದು ಶಾಸಕರಾದ ಉಮಾನಾಥ ಕೋಟ್ಯಾನ್ ಮತ್ತು ವೇದವ್ಯಾಸ ಕಾಮತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News