‘ಪಕ್ಷಿಕೆರೆ’ಯಲ್ಲಿ ಸಮೃದ್ಧಗೊಂಡ ಕೊಳವೀಗ ಪ್ರಾಣಿ ಪಕ್ಷಿಗಳ ಆಶ್ರಯ ತಾಣ

ಮಂಗಳೂರು, ಎ. 14: ಸಾರ್ವಜನಿಕರ ಸಹಭಾಗಿತ್ವದಲ್ಲಿ ನೈಸರ್ಗಿಕವಾಗಿ ಅಭಿವೃದ್ಧಿಪಡಿಸಲಾದ ಪಕ್ಷಿಕೆರೆಯ ಕೊಳ ಬಿರು ಬೇಸಿಗೆಯಲ್ಲಿಯೂ ಸುತ್ತಮುತ್ತಲೂ ಹಚ್ಚ ಹಸಿರಿನೊಂದಿಗೆ ಪ್ರಾಣಿ ಪಕ್ಷಿಗಳಿಗೆ ಭರಪೂರ ನೀರೊದಗಿಸುವ, ಆಶ್ರಯ ತಾಣವಾಗಿಯೂ ಮಾರ್ಪಟ್ಟಿದೆ.
ನಗರದ ಹೊರವಲಯದ ಕೆಮ್ರಾಲ್ ಗ್ರಾ.ಪಂನ ಪಕ್ಷಿಕೆರೆ ಗ್ರಾಮದ ಸರಕಾರಿ ಕೆರೆಯನ್ನು ಪೇಪರ್ ಸೀಡ್ ಸಂಸ್ಥೆಯು ಸ್ಥಳೀಯರ ಸಹಕಾರದೊಂದಿಗೆ ಹೂಳೆತ್ತಿ ಶುಚಿಗೊಳಿಸಿ ಕೊಳದ ಸುತ್ತ ಗಿಡಗಳನ್ನು ನೆಟ್ಟು ಪೋಷಿಸಿದ್ದರು. ಬೇಸಿಗೆಯಲ್ಲೂ ಅಲ್ಪಸ್ವಲ್ಪ ನೀರಿನಿಂದ ಕೂಡಿರುತ್ತಿದ್ದ ಕೊಳವೀಗ ತುಂಬಿದ್ದು, ಇಲ್ಲಿಗೆ ಹಿಂದಿಗಿಂದಲೂ ಹೆಚ್ಚಿನ ಸಂಖ್ಯೆಯ ಪ್ರಾಣಿ ಪಕ್ಷಿಗಳು ಬರಲಾರಂಭಿಸಿವೆ.
ಸುಮಾರು ಎರಡು ವರ್ಷಗಳ ಹಿಂದೆ ಯುವಜನರು ಸೇರಿದಂತೆ ಸ್ಥಳೀಯರಲ್ಲಿ ಪರಿಸರದ ಜಾಗೃತಿಗಾಗಿ ಪಚ್ಚನಾಡಿಯಿಂದ ಪಕ್ಷಿಕೆರೆಯ ಪೇಪರ್ ಸೀಡ್ ವಿಲೆಜ್‌ರೆಗೆ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾ ಸಂದರ್ಭ ಸ್ಥಳೀಯರು ಇಲ್ಲಿನ ‘ಪಕ್ಷಿ’ ಹಾಗೂ ‘ಕೆರೆ’ (ಕೊಳ)ಗಳನ್ನು ಉಳಿಸುವ ಬಗ್ಗೆ ಸ್ಥಳೀಯರು ಧ್ವನಿ ಎತ್ತಿದ್ದರು. ಈ ಮೂಲಕ ರೂಪುಗೊಂಡ ಯೋಜನೆಯಡಿ ಇಲ್ಲಿನ ‘ಕಾಟಿ ಪಳ್ಳ’ (ಕಾಡು ಎಮ್ಮೆಗಳು ನೀರು ಕುಡಿಯುತ್ತಿದ್ದ ಜಾಗ) ಎಂದು ಕರೆಯುವ ಕೊಳವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಗಿದ್ದು, ಅದಕ್ಕೆ ಪಕ್ಷಿಕೆರೆ ಎಂದೇ ಮರು ನಾಮಕರಣ ಮಾಡಲಾಗಿದೆ.
ಕೆಸರು ಮತ್ತು ಮಣ್ಣಿನಿಂದ ಹೂತು ಹೋಗಿದ್ದ ಕೊಳವನ್ನು ಅಗಲಗೊಳಿಸಿ ಹೂಳು ತೆಗೆದು, ಕೊಳಕ್ಕೆ ಹರಿದು ಬರುವ ಒಸರನ್ನು ಪತ್ತೆ ಹಚ್ಚಿ ಅದಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವ, ಎತ್ತರ ಪ್ರದೇಶಗಳಿಂದ ಆ ಕೊಳಕ್ಕೆ ಹೂಳು ತುಂಬದಂತೆ, ಪ್ರವಾಹ ನೀರು ಹರಿದು ಹೋಗಲು ಸೂಕ್ತ ವೈಜ್ಞಾನಿಕ ವ್ಯವಸ್ಥೆಯನ್ನು ಪ್ರಾಜೆಕ್ಟ್ ಪಕ್ಷಿಕೆರೆ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿತ್ತು.
ಇದೀಗ ಇಲ್ಲಿಗೆ ಮುಳ್ಳುಹಂದಿ, ಕಾಡು ಹಂದಿ, ಕಾಡುಬೆಕ್ಕು, ವಿವಿಧ ಜಾತಿಯ ಪಕ್ಷಿಗಳ ಜತೆಗೆ ಇತ್ತೀಚೆಗೆ ಜಿಂಕೆಯೊಂದು ನೀರು ಕುಡಿದಿರುವ ದೃಶ್ಯವೂ ಇಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿರ್ಲಕ್ಷ ಒಳಗಾಗಿ ಕಟ್ಟಡ ತ್ಯಾಜ್ಯ, ಕಸದ ಕೊಂಪೆಯಾಗಿದ್ದ ಈ ತಾಣವನ್ನು ಪೇಪರ್ ಸೀಡ್ ಸಂಸ್ಥೆ ಯವರು ಸ್ಥಳೀಯರ ಸಹಕಾರದೊಂದಿಗೆ ಅಭಿವೃದ್ಧಿಪಡಿಸಿದ್ದು, ಎಂಸಿಎಫ್‌ನ ಸಿಎಸ್‌ಆರ್ ನಿಧಿಯ ನೆರವೂ ದೊರಕಿ ಕಾಮಗಾರಿ ಉತ್ತಮವಾಗಿ ನಡೆಸಲು ಸಹಕಾರಿಯಾಗಿದೆ ಎಂದು ಪೇಪರ್ ಸೀಡ್ ಸಂಸ್ಥೆಯ ಮುಖ್ಯಸ್ಥ ನಿತಿನ್‌ವಾಸ್ ತಿಳಿಸಿದ್ದಾರೆ.