ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿತ್ವ ರೂಪಿಸಲು ಕರಾಟೆ ಪೂರಕ: ಯು.ಟಿ.ಖಾದರ್
ಮಂಗಳೂರು, ಸೆ.6: ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಕರಾಟೆ ಪೂರಕವಾಗಿದೆ. ಆತ್ಮರಕ್ಷಣೆಯ ಕಲೆಯಾಗಿರುವ ಕರಾಟೆ ಇವತ್ತು ಜೀವಂತವಾಗಿ ಉಳಿದಿದ್ದರೆ ಮಕ್ಕಳ ಹೆತ್ತವರು, ಗುರು ಹಿರಿಯರು ಅದಕ್ಕೆ ಕಾರಣ. ಹೆತ್ತವರು ಮಕ್ಕಳಲ್ಲಿ ಕರಾಟೆಗೆ ಆಸಕ್ತಿ ಬೆಳೆಸಿ, ಅವರಿಗೆ ಪ್ರೋತ್ಸಾಹ ನೀಡುವುದರಿಂದ ಇದು ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಸೆಲ್ಫ್ ಡಿಫೆನ್ಸ್ ‘ಸ್ಕೂಲ್ ಆಫ್ ಇಂಡಿಯನ್ ಕರಾಟೆ ಮಂಗಳೂರು ಡೊಜೊ ಇದರ ಆಶ್ರಯದಲ್ಲಿ ನಗರದ ಕುಲಶೇಖರದ ಕೋರ್ಡೆಲ್ ಚರ್ಚ್ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಶೌರ್ಯ ಅಂತರ್ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮಂಗಳೂರಿನ ಮಕ್ಕಳು ಅಂತರ್ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಬೇಕಾದರೆ ಎರಡು -ಮೂರು ಲಕ್ಷ ರೂ. ಖರ್ಚು ಮಾಡಬೇಕಾಗಿತ್ತು. ಆದರೆ ಇದೀಗ ಅವರ ಕಾಲಬುಡದಲ್ಲೇ ಈ ಅವಕಾಶ ಒದಗಿಬಂದಿದೆ ಎಂದು ಖಾದರ್ ಹೇಳಿದರು.
ಮಂಗಳೂರಿನಲ್ಲಿ ಅಂತರ್ ರಾಷ್ಟ್ರೀಯ ಕರಾಟೆ ಸಂಘಟಿಸುವ ಮೂಲಕ ಮೂಲಕ ಮಂಗಳೂರಿನ ಸಂಸ್ಕೃತಿ, ಪರಂಪರೆಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸುವ ಪ್ರಯತ್ನ ಆಗಿದೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ಬಿಷಪ್ ವಂ.ಡಾ. ಪೀಟರ್ ಪೌಲ್ ಸಲ್ದಾನ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಮನಪಾ ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಶುಭ ಹಾರೈಸಿ ಮಾತನಾಡಿ, ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಮಹಾನಗರ ಪಾಲಿಕೆ 10 ಲಕ್ಷ ರೂ. ದೊರಕಿಸಿ ಕೊಡುವ ಭರವಸೆ ನೀಡಿದರು.
ಸಂಘಟನಾ ಸಮಿತಿಯ ಅಧ್ಯಕ್ಷ ಮತ್ತು ಶಾಸಕ ಡಿ.ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಂದ್ಯಾವಳಿಯ ನಿರ್ದೇಶಕ ಎ.ಸದಾನಂದ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಐಒ ಅಧ್ಯಕ್ಷ ಹಾಂಶಿ ಭರತ್ ಶರ್ಮ, ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಸಂಸ್ಥೆಯ ಅಧ್ಯಕ್ಷ ಕಿಯೋಸಿ ಈಶ್ವರ ಕಟೀಲ್, ಕೋಶಾಧಿಕಾರಿ ಕಿಯೋಸಿ ಮಧು ಪಾಟೀಲ್, ಭಾರ್ಗವ ರೆಡ್ಡಿ, ಕರಾಟೆ ಶಿಕ್ಷಕ ಜನಾರ್ದನ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಚಾಂಪಿಯನ್ ಶಿಪ್ ನ ಸಂಚಾಲಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಸಂಘಟನೆಯ ಸ್ಥಾಪಕ ಅಧ್ಯಕ್ಷ ಕೆ.ತೇಜೊಮಯ, ಕರಾಟೆ ಚಾಂಪಿಯನ್ ಶಿಪ್ ಸಂಘಟನಾ ಸಮಿತಿಯ ಅಧ್ಯಕ್ಷ ಕಿಯೋಸಿ ಸುರೇಂದ್ರ ಬಿ., ಉಪಾಧ್ಯಕ್ಷರಾದ ಫಾ.ಕ್ಲಿಫರ್ಡ್ ಫೆರ್ನಾಂಡಿಸ್, ಕಿಶೋರ್ ಶೆಟ್ಟಿ, ಪ್ರಮುಖರಾದ ಧನುಷ್ ರೈ, ರಾಜೇಶ್ ಆಚಾರ್, ಸಚಿನ್ ರಾಜ್ ರೈ, ಅನೀಶ್ ಬಿ., ಬಿಪಿನ್ ರಾಜ್ ರೈ, ದಿನೇಶ್ ಕುಮಾರ್ ಬಿಜೈ, ಸಲಹೆಗಾರ ರಾಜಗೋಪಾಲ ರೈ, ಡಾ. ರಾಹುಲ್ ಟಿ.ಜಿ., ತಾಂತ್ರಿಕ ನಿರ್ದೆಶಕ ಕಿಯೋಸಿ ಸುರೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.