ಮಂಗಳೂರು| ಪ್ರಥಮ ಬಾರಿಗೆ ಮೆದುಳಿನ ಕಾಯಿಲೆಗೆ ಅಸ್ಥಿಮಜ್ಜಿ ಕಸಿ

Update: 2024-08-24 16:34 GMT

ಮಂಗಳೂರು: ಮಂಗಳೂರಿನಲ್ಲಿ ಇದೇ ಪ್ರಥಮ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿಯನ್ನು (ಆಟೋಲೋಗಸ್ ಟ್ರಾನ್ಸ್‌ಪ್ಲಾಂಟ್) ದೇರಳಕಟ್ಟೆಯ ಝುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆಯಿತು.

ಖ್ಯಾತ ರಕ್ತ ಶಾಸ್ತ್ರಜ್ಞ ಡಾ.ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ನಡೆಸಲಾಗಿದೆ. 59 ವಯಸ್ಸಿನ ಕದ್ರಿ ಮೂಲದ ವ್ಯಕ್ತಿ ಮೆದುಳಿನ ಲಿಂಪೋಮಾ ಕಾಯಿಲೆಯಿಂದ ಬಳಲುತ್ತಿದ್ದರು. ಜುಲೇಖಾ ಯೆನೆಪೋಯ ಆಸ್ಪತ್ರೆಗೆ ಬಂದ ಅವರನ್ನು ಸ್ವಅಸ್ಥಿ ಮಜ್ಜಿ ಕಸಿಗೆ ಒಳಪಡಿಸಲು ನಿರ್ಧರಿಸಲಾಯಿತು. ಅವರ ಅಸ್ಥಿಮಜ್ಜಿಯನ್ನು ತೆಗೆದು ಶೀಥಿಲೀಕರಿಸಿ, ಥಯೋಟೀಪಾ ಎಂಬ ಕೀಮೋಥೆರಪಿಯನ್ನು ನೀಡಿ ನಂತರ ರೋಗಿಯು ಅಸ್ಥಿಮಜ್ಜಿಯನ್ನು ಪುನ: ಅಳವಡಿಸಲಾಯಿತು. ನಾಲ್ಕು ವಾರದಲ್ಲಿ ರೋಗಿಯು ಗುಣಮುಖರಾಗಿದ್ದಾರೆ.

ಥಯೋಟೀಪಾ ಎನ್ನುವುದು ಕೆಲವು ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಒಂದು ರೀತಿಯ ಕಿಮೊಥೆರಪಿ ಔಷಧವಾಗಿದೆ. ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಹರಡುವಿಕೆಯನ್ನು ನಿಲ್ಲಿಸುವ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ದೇಹವನ್ನು ಕಸಿ ಮಾಡಲು ಮತ್ತು ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮೂಳೆ ಮಜ್ಜೆಯ ಕಸಿ ಮಾಡುವ ಮೊದಲು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ.

ಈ ಚಿಕಿತ್ಸೆ ನೀಡಿದ ತಂಡದಲ್ಲಿ 15 ವರ್ಷ ಯುನೈಟೆಡ್ ಕಿಂಗ್‌ಡಂನಲ್ಲಿ ಕೆಲಸದ ಅನುಭವ ಹೊಂದಿರುವ ಡಾ. ರಾಜೇಶ್ ಕೃಷ್ಣ, ಮಕ್ಕಳ ಕ್ಯಾನ್ಸರ್ ತಜ್ಞೆ ಡಾ. ಅನುಷಾ ಹೆಗ್ಡೆ, ರಕ್ತ ಬ್ಯಾಂಕ್‌ನ ತಜ್ಞೆ ಡಾ.ಇಂದಿರಾ ಪುತ್ರನ್ ಹಾಗೂ ಝುಲೇಖಾ ಯೆನೆಪೋಯ ಆಸ್ಪತ್ರೆಯ ಪರಿಣಿತ ಸಿಬ್ಬಂದಿಗಳಿದ್ದರು.

ಈ ತಂಡ ಅಲ್ಪಾವಧಿಯಲ್ಲಿ 30ಕ್ಕೂ ಹೆಚ್ಚಿನ ಅಸ್ಥಿ ಮಜ್ಜಿ ಕಸಿಯನ್ನು ಸುಸೂತ್ರವಾಗಿ ನಡೆಸಿದ್ದಾರೆ. ಇವರ ಸಾಧನೆಯನ್ನು ಜುಲೇಖಾ ಯೆನೆಪೋಯ ಅಸ್ಪತ್ರೆ ಕುಲಪತಿ ಡಾ. ವೈ.ಅಬ್ದುಲ್ಲಾ ಕುಂಞಿ ಹಾಗೂ ಉಪಕುಲಪತಿ ಡಾ.ವಿಜಯ ಕುಮಾರ್ ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News