ಮಂಗಳೂರು ವಿವಿ ಗಣೇಶೋತ್ಸವ ವಿವಾದ; ಹೊರಗಿನವರ ಹಸ್ತಕ್ಷೇಪ ಸರಿಯಲ್ಲ: ದಿನೇಶ್ ಗುಂಡೂರಾವ್
ಮಂಗಳೂರು, ಸೆ. 11: ಮಂಗಳೂರು ವಿಶ್ವವಿದ್ಯಾನಿಲಯ ಈಗಾಗಲೇ ಬಿ. ಗ್ರೇಡ್‌ಗೆ ಹೋಗಿದೆ. ಅದನ್ನು ಎ ಗ್ರೇಡ್‌ಗೆ ತರಲು ಅಗತ್ಯ ಕ್ರಮಗಳನ್ನ ನಾವು ಮೊದಲು ಮಾಡಬೇಕಾಗಿದೆ. ವಿವಿ ಸ್ವಾಯತ್ತ ಸಂಸ್ಥೆ. ಅವರ ಆಡಳಿತ ಮಂಡಳಿ ಹಂತದಲ್ಲೇ ಅದನ್ನು ಬಗೆಹರಿಸಬೇಕೇ ಹೊರತು ಅದಕ್ಕೆ ಹೊರಗಿನವರ ಹಸ್ತಕ್ಷೇಪ ಸರಿಯಲ್ಲ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು,ಮಂಗಳೂರು ವಿಶ್ವವಿದ್ಯಾನಿಲಯದ ವಿಸಿ ಹಾಗೂ ರಾಜ್ಯಪಾಲರು ಅದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ ಏನು ಮಾತನಾಡುತ್ತಾರೋ ಅದು ನಮಗೆ ಸಂಬಂಧಿಸಿದ್ದಲ್ಲ. ವಿವಿ ಶೈಕ್ಷಣಿಕವಾಗಿ ಬೆಳೆಯಬೇಕು. ಅಭಿವೃದ್ಧಿಯಾಗಬೇಕು. ಅನಗತ್ಯ ವಿಚಾರಗ ಬಗ್ಗೆ ಹೊರಗಿನವರು ಯಾಕೆ ಮಾತನಾಡಬೇಕು ಎಂದು ಪ್ರಶ್ನಿಸಿದರು.
ಕಳೆದ 40 ವರ್ಷಗಳಿಂದ ಅಲ್ಲಿ ಗಣೇಶೋತ್ಸವ ಆಚರಿಸುತ್ತಾರೆಂಬ ಮಾಹಿತಿ ಇದೆ. ಈಗ ಯಾಕೆ ವಿವಾದ ಮಾಡಲಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ವಿವಿ ಹಣ ಸಾರ್ವಜನಿಕರದ್ದು, ಅದು ಶಿಕ್ಷಣಕ್ಕೆ ಬಳಕೆ ಆಗಬೇಕು. ಕೆಲವರಿಗೆ ವೇತನ, ನಿವೃತ್ತಿ ವೇತನ ನೀಡಿಲ್ಲ. ಅವೆಲ್ಲಾ ಮೊದಲು ಸರಿ ಆಗಲಿ. ಹಬ್ಬ ಆಚರಣೆ ವಿವಿ ವಿವೇಚನೆಗೆ ಬಿಟ್ಟಿದ್ದು. ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಮುಖ್ಯ ಚುನಾವಣೆ ಹತ್ತಿರ ಬಂದಾಗ ಈ ರೀತಿ ಅಶಾಂತಿ ಸೃಷ್ಟಿಸುವುದನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಬಿ.ಕೆ. ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬಗ್ಗೆ ಹೇಳಿದ್ದಾರೆನ್ನಲಾದ ಆಕ್ಷೇಪದ ಮಾತುಗಳ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಪ್ರಬುದ್ಧ ರಾಜಕಾರಣಿಯೊಬ್ಬರು ಈ ರೀತಿ ಮಾತನಾಡಬಾರದು. ಸಾರ್ವಜನಿಕ ವೇದಿಕೆಯಲ್ಲಿ ಈ ತೆರನಾದ ಹೇಳಿಕ ಸಮಂಜಸವಲ್ಲ. ಬಿಲ್ಲವ ಈಡಿಗರು ಸೇರಿದಂತೆ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಕಾಂಗ್ರೆಸ್‌ನಲ್ಲಿ ಇಲ್ಲ ಎಂದರು.