‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯ ಟಾಪ್ 8ರಲ್ಲಿ ಮಂಗಳೂರಿನ ಮುಹಮ್ಮದ್ ಆಶಿಕ್

Update: 2023-11-22 17:26 GMT

ಮುಹಮ್ಮದ್ ಆಶಿಕ್

ಮಂಗಳೂರು, ನ.22: ‘ಸೋನಿ ಲೈವ್’ ಓಟಿಟಿ ಪ್ಲಾಟ್ ಫಾರ್ಮ್ ಮುಂಬೈಯಲ್ಲಿ ಆಯೋಜಿಸಿರುವ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಮಂಗಳೂರಿನ 24ರ ಹರೆಯದ ಯುವಕ ಮುಹಮ್ಮದ್ ಆಶಿಕ್ ಟಾಪ್ 8ರಲ್ಲಿ ಸ್ಥಾನ ಪಡೆದಿದ್ದಾರೆ.

ದ.ಕ.ಜಿಲ್ಲೆಯ ಯುವಕನೊಬ್ಬ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡ ಹಿರಿಮೆಗೆ ಪಾತ್ರನಾಗಿದ್ದಾನೆ. ಅಲ್ಲಿ ಟಾಪ್ ಎಂಟಕ್ಕೆ ತಲುಪಿರುವ ಈತನಿಗೆ ಅಭಿನಂದನೆ ಸಲ್ಲಿಸುವ ಫ್ಲೆಕ್ಸ್, ಬ್ಯಾನರ್‌ಗಳು ಈಗಾಗಲೆ ನಗರದಾದ್ಯಂತ ರಾರಾಜಿಸುತ್ತಿವೆ.

ನಗರದ ಜೆಪ್ಪು ಮಹಾಕಾಳಿಪಡ್ಪುವಿನ ಅಬ್ದುಲ್ ಖಾದರ್-ಸಾರಮ್ಮ ದಂಪತಿಯ ಏಕೈಕ ಪುತ್ರನಾಗಿರುವ ಮುಹಮ್ಮದ್ ಆಶಿಕ್‌ಗೆ ನಾನ ವಿಧದದ ಅಡುಗೆ ತಯಾರಿಯಲ್ಲಿ ಸಣ್ಣ ವಯಸ್ಸಿನಲ್ಲೇ ಆಸಕ್ತಿಯಿತ್ತು. ಹೋಟೆಲ್ ಮ್ಯಾನೇಜ್ ಮೆಂಟ್ ಕಲಿಯಬೇಕೆಂಬ ಬಯಕೆಯಿತ್ತು. ಆದರೆ ಮನೆಯ ಆರ್ಥಿಕ ಸ್ಥಿತಿಗತಿ ಅದಕ್ಕೆ ಅವಕಾಶ ನೀಡಲಿಲ್ಲ. ಆರ್ಥಿಕ ಸಮಸ್ಯೆ ಪರಿಹರಿಸಿಕೊಂಡು ಸಾಧಿಸುವ ಛಲ ಆಶಿಕ್ ಅವರಲ್ಲಿತ್ತು. ಹಾಗಾಗಿ ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ತನ್ನ ಮನೆಯಲ್ಲೇ ಶುಚಿ- ರುಚಿಯಾದ ಹೊಸ ಶೈಲಿಯ, ವಿಶಿಷ್ಟ ಸ್ವಾದದ ಆಹಾರಗಳನ್ನು ತಯಾರಿಸಿ ಕೊಡಲಾರಂಭಿಸಿದರು. ಅದರ ಜೊತೆಗೆ ನಗರದ ಬೇರೆ ಬೇರೆ ಕಾಲೇಜುಗಳಲ್ಲಿ ನಡೆಯುವ ನಾನಾ ಕಾರ್ಯಕ್ರಮಗಳ ಸಂದರ್ಭ ‘ಸ್ಟಾಲ್’ ಹಾಕಿ ವ್ಯಾಪಾರ ಮಾಡುತ್ತಿದ್ದರು. ಆಹಾರವಲ್ಲದೆ ಕುಲ್ಕಿ ಶರ್ಬತ್ ಸಹಿತ ನಾನಾ ಬಗೆಯ ಪಾನೀಯಗಳನ್ನು ಕೂಡ ಮಾರಾಟ ಮಾಡತೊಡಗಿದರು.

ನಗರದ ಕಾಶಿಯಾ ಮತ್ತು ರೊಝಾರಿಯೋ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತ ಮುಹಮ್ಮದ್ ಆಶಿಕ್ ದ್ವಿತೀಯ ಪಿಯುಸಿ ತರಗತಿ ತೇರ್ಗಡೆ ಹೊಂದಿದ ಬಳಿಕ ಶಿಕ್ಷಣ ಮುಂದುವರಿಸಲಾಗದೆ ಮಂಗಳೂರಿನ ಫಿಝಾ ಮಾಲ್‌ನ ರೆಡಿಮೇಡ್ ಶಾಪ್‌ವೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡತೊಡಗಿದರು. ಆದರೆ ಮನಸ್ಸೆಲ್ಲಾ ಅಹಾರ ತಯಾರಿ ಅಥವಾ ಅಡುಗೆ ಮನೆಯಲ್ಲೇ ಇತ್ತು. ಈತನ ‘ಶೆಫ್’ ಕಲೆಯನ್ನು ಗುರುತಿಸಿದ ಸಂಬಂಧಿಕರೇ ಆದ ಬಂಟ್ವಾಳದ ಮುಹಮ್ಮದ್ ಅಲಿ ಎಂಬವರು ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದರು.

ಅದರಂತೆ ತನ್ನ 20ರ ಹರೆಯದಲ್ಲೇ ನಗರದ ಬಲ್ಮಠದಲ್ಲಿ ‘ಕುಲ್ಕಿ ಹಬ್’ ತೆರೆದ ಮುಹಮ್ಮದ್ ಆಶಿಕ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. ಪೂರ್ಣಪ್ರಮಾಣದಲ್ಲಿ ‘ ಶೆಫ್ ’ ಆಗಲು ನಿರ್ಧರಿಸಿ ರಾತ್ರಿ ಹಗಲೆನ್ನದೆ ಪರಿಶ್ರಮಿಸಿದರು. ಹಾಗೇ ‘ ಶೆಫ್' ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರು. ಅಲ್ಲದೆ ಹೈದರಾಬಾದ್, ಬೆಂಗಳೂರಿನಲ್ಲಿ ನಡೆದ ‘ ಶೆಫ್ ’ ಸ್ಪರ್ಧೆಯಲ್ಲಿ ಪಾಲ್ಗೊಳಲು ಆರಂಭಿಸಿದರು. ಮಂಗಳೂರಿನಲ್ಲಿ ನಡೆದ ಮಾಸ್ಟರ್ ಶೆಫ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು. ಕಳೆದ ಬಾರಿ ‘ಸೋನಿ ಟಿವಿ’ ಸಂಸ್ಥೆಯವರು ಆಯೋಜಿಸಿದ ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮುಹಮ್ಮದ್ ಆಶಿಕ್ ಧೃತಿಗೆಡಲಿಲ್ಲ. ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಛಲಬಿಡದೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ದೇಶಾದ್ಯಂತ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ಸದ್ಯ ಮುಂಬೈಯಲ್ಲಿ ನಡೆಯುತ್ತಿರುವ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಟಾಪ್ 8ರಲ್ಲಿ ಸ್ಥಾನ ಪಡೆದಿದ್ದಾರೆ.

ಈ ಸ್ಪರ್ಧೆಯನ್ನು ಸೋನಿ ಲೈವ್ ಓಟಿಟಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ. ಮಹಿಳಾ ಸ್ಪರ್ಧಿಯೊಬ್ಬರ ಅಡುಗೆ ತಯಾರಿಸುವ ಪರಿಕರಕ್ಕೆ ಹಾನಿಯಾದಾಗ ಕ್ಷಣಾರ್ಧದಲ್ಲಿ ಮುಹಮ್ಮದ್ ಆಶಿಕ್ ನೆರವಿಗೆ ಧಾವಿಸಿರುವ ದೃಶ್ಯವಂತೂ ಸಾಕಷ್ಟು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

‘ರುಚಿಕರವಾದ ಆಹಾರ-ಪಾನೀಯ ತಯಾರಿಸುವುದು ನನ್ನ ಇಷ್ಟದ ಹವ್ಯಾಸವಾಗಿದೆ. ಕಲಿಯುವಾಗಲೇ ಈ ಹವ್ಯಾಸವನ್ನು ವೃತ್ತಿಯನ್ನಾಗಿಸಲು ಮುಂದಾದೆ. ಆದರೆ ನನ್ನ ತಾಯಿಗೆ ಇದು ಅಷ್ಟೊಂದು ಸರಿ ಕಾಣಲಿಲ್ಲ. ಯುವಕನಾಗಿ ಈ ಕೆಲಸ ಮಾಡುವ ಬದಲು ಗಲ್ಫ್‌ಗೆ ಹೋಗಬಾರದೇ ಎಂದು ಕೇಳುತ್ತಿದ್ದರು. ಪರಿಚಯಸ್ಥರ ಪ್ರಶ್ನೆಗೂ ಅವರಲ್ಲಿ ಸಮರ್ಪಕ ಉತ್ತರವಿರಲಿಲ್ಲ. ಆವಾಗ ತಾಯಿಗೆ ‘ಶೆಫ್ ’ನ ಮಹತ್ವ ಗೊತ್ತಿರಲಿಲ್ಲ. ಇದೀಗ ನಾನು ಈ ಸ್ಪರ್ಧೆಯ ಟಾಪ್ 8ರಲ್ಲಿರುವುದು ಅವರಿಗೆ ಸಂತಸ ತಂದಿದೆ. ನಾನು ಈ ಹಂತ ತಲುಪಲು ತಂದೆ-ತಾಯಿ ಹಾಗೂ ಕುಟುಂಬದ ಸರ್ವ ಸದಸ್ಯರು ವಿಶೇಷವಾಗಿ ನನ್ನ ಭಾವ ಮುಹಮ್ಮದ್ ಅಲಿ ಅವರ ಪ್ರೋತ್ಸಾಹವನ್ನು ಮರೆಯಲು ಸಾಧ್ಯವಿಲ್ಲ. ಈ ಸ್ಪರ್ಧೆಯ ಫಲಿತಾಂಶವು ಡಿಸೆಂಬರ್ ಅಂತ್ಯಕ್ಕೆ ಹೊರಬೀಳಲಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದು ಮುಹಮ್ಮದ್ ಆಶಿಕ್ ಹೇಳುತ್ತಾರೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News