ಮಂಗಳೂರು| ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಸಜೆ, ದಂಡ

Update: 2025-01-10 13:49 GMT

ಮಂಗಳೂರು, ಜ.10: ಪಾರ್ಟಿಯೊಂದರಲ್ಲಿ ಯುವತಿಗೆ ಅಮಲು ಪದಾರ್ಥ ಮಿಶ್ರಿತ ವೈನ್ ನೀಡಿ ಬಳಿಕ ಆಕೆಯನ್ನು ಅತ್ಯಾಚಾರವೆಸಗಿದ ಪ್ರಕರಣದ ಆರೋಪಿಗೆ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.

ನಗರದ ಲೈಟ್‌ಹೌಸ್ ಹಿಲ್ ರೋಡ್ ನಿವಾಸಿ ಬ್ರಯಾನ್ ರಿಚರ್ಡ್ ಅಮನ್ನಾ (34) ಶಿಕ್ಷೆಗೊಳಗಾದ ಆರೋಪಿ.

ಯುವತಿಯು ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದು, ಆಕೆಗೆ ಬ್ಯಾಂಕ್‌ನ ಗ್ರಾಹಕರಾದ ನೌಕಾಪಡೆಯಲ್ಲಿ ಉದ್ಯೋಗಿ ಯಾಗಿದ್ದ ಜಾಯಿಲಿನ್ ಗ್ಲಾನೆಲ್ ಪಿಂಟೋ ಎಂಬವರ ಪರಿಚಯವಾಗಿತ್ತು. ಗ್ಲಾನೆಲ್‌ಗೆ ಅಂಡಮಾನ್‌ಗೆ ವರ್ಗಾವಣೆಯಾದ ನಿಮಿತ್ತ 2021ರ ಫೆ.5ರಂದು ರಾತ್ರಿ ಪುತ್ತೂರಿನ ಕೊಡಿಪ್ಪಾಡಿ ಗ್ರಾಮದ ಕೊಡಿಕಾಡು ಎಂಬಲ್ಲಿರುವ ಗೆಸ್ಟ್‌ಹೌಸ್‌ನಲ್ಲಿ ಸ್ನೇಹಿತರಿಗೆಲ್ಲ ಪಾರ್ಟಿ ಆಯೋಜಿಸಲಾಗಿತ್ತು. ಅದರಂತೆ ಯುವತಿಯೂ ಪಾರ್ಟಿಗೆ ಹಾಜರಾಗಿದ್ದರು. ಈ ಸಂದರ್ಭ ಯುವತಿಯನ್ನು ಪರಿಚಯಿಸಿಕೊಂಡಿದ್ದ ಬ್ರಯಾನ್ ರಿಚರ್ಡ್ ಅಮನ್ನಾ ಬಳಿಕ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಆರೋಪ ಸಾಬೀತುಪಡಿಸಿ ಶುಕ್ರವಾರ ತೀರ್ಪು ಪ್ರಕಟಿಸಿದ್ದಾರೆ. ಅದರಂತೆ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ: 376ಕ್ಕೆ 10 ವರ್ಷ ಕಠಿಣ ಶಿಕ್ಷೆ ಮತ್ತು 10,000 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ:328ಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ತಿಮ್ಮಪ್ಪ ನಾಯ್ಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅಭಿಯೋಜನೆ ಪರ 21 ಮಂದಿ ಸಾಕ್ಷಿ ನುಡಿದಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಬಿ. ಶೆಖರ ಶೆಟ್ಟಿ ಚೌಧರಿ ಮೋತಿಲಾಲ ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News