ದ್ವೇಷ ರಾಜಕಾರಣದ ಭಾಷಣಗಳು ಸೋಲಲಿದೆ: ಲೆಫ್ಟಿನೆಂಟ್ ಭವ್ಯಾ ನರಸಿಂಹಮೂರ್ತಿ

Update: 2025-01-10 17:01 GMT

ಮಂಗಳೂರು, ಜ.10: ಯಾರು, ಎಷ್ಟೇ ದ್ವೇಷ ರಾಜಕಾರಣದ ಭಾಷಣಗಳನ್ನು ಮಾಡಿದರೂ ಕೂಡ ಅದಕ್ಕೆ ಒಂದಲ್ಲೊಂದು ದಿನ ಅಂತ್ಯ ಸಿಗಲಿದೆ. ಹಾಗೇ ಈ ದ್ವೇಷ ರಾಜಕಾರಣದ ಭಾಷಣಗಳು ಸೋಲಲಿದೆ, ಪ್ರಜಾಪ್ರಭುತ್ವ ಗೆಲ್ಲಲಿದೆ ಮತ್ತು ಭಾರತೀಯತೆ ಉಳಿಯಲಿದೆ ಎಂದು ಲೆಫ್ಟಿನೆಂಟ್ ಭವ್ಯಾ ನರಸಿಂಹಮೂರ್ತಿ ಆಶಾಭಾವನೆ ವ್ಯಕ್ತಪಡಿಸಿದರು.

ಮುಸ್ಲಿಮ್ ಲೇಖಕರ ಸಂಘವು ಮರ್ಹೂಂ ಯು.ಟಿ. ಫರೀದ್ ಸ್ಮರಣಾರ್ಥ ಹಿರಿಯ ಸಾಹಿತಿ ಡಾ. ಮಿರ್ಜಾ ಬಶೀರ್‌ಗೆ ನಗರದ ಸಂತ ಅಲೋಶಿಯಸ್ ಕಾಲೇಜು ಆವರಣದಲ್ಲಿರುವ ಸಹೋದಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ 2023ನೇ ಸಾಲಿನ ರಾಜ್ಯ ಮಟ್ಟದ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ʼದ್ವೇಷ ರಾಜಕಾರಣ ಮತ್ತು ಪ್ರಜಾತಂತ್ರದ ಭವಿಷ್ಯʼ ಎಂಬ ವಿಷಯದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.


ಜಗತ್ತಿನಲ್ಲಿ ಕ್ರಾಂತಿಯಾಗಲು, ಹೋರಾಟ ನಡೆಯಲು, ದೇಶಗಳು ಸ್ವತಂತ್ರಗೊಳ್ಳಲು ಭಾಷಣಗಳು ಪ್ರಮುಖ ಪಾತ್ರ ವಹಿಸಿವೆ. ಆದರೆ ದ್ವೇಷದ ಭಾಷಣಗಳಿಂದ ಕೋಮುಗಲಭೆ, ನರಮೇಧ ಮತ್ರ ನಡೆದಿದೆ. ಅಂದರೆ ಹಿಟ್ಲರ್‌ನಿಂದ ನರಮೇಧ ನಡೆದಿದ್ದರೆ, ಗಾಂಧೀಜಿ, ನೆಹರೂ, ಪಟೇಲರ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ನೈತಿಕತೆ, ಭಾವನೆಗಳು, ಸತ್ಯಾಂಶಗಳಿಂದ ಕೂಡಿದ ಭಾಷಣಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ ವಾಗಿದೆ ಎಂದು ಭವ್ಯಾ ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.


ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ದ್ವೇಷದ ಭಾಷಣಗಳು ಹೆಚ್ಚಾಗುತ್ತಿವೆ. ಮುಸ್ಲಿಮರು, ದಲಿತರು, ಮಹಿಳೆಯರ ವಿರುದ್ಧ ಪ್ರಧಾನಿಯ ದ್ವೇಷದ ಭಾಷಣಗಳು ಮೇಲೈಸುತ್ತಿವೆ. ಇಂತಹ ಅನ್ಯಾಯ, ಅಕ್ರಮದ ವಿರುದ್ಧ ಹೋರಾಟ ಮಾಡಿದ ಅದೆಷ್ಟೋ ಮಂದಿ ಯುಎಪಿಎ ಕಾಯ್ದೆಯಡಿ ಬಂಧಿಸಲ್ಪಟ್ಟು ಇಂದಿಗೂ ಜೈಲಿನಲ್ಲಿದ್ದಾರೆ. ದ್ವೇಷದ ಭಾಷಣಗಳನ್ನು ಮಾಡಿ ಸಮಾಜವನ್ನು ವಿಭಜಿಸಿದ ರಾಜಕಾರಣಿಗಳು ಸಂಸತ್ತಿನೊಳಗಿದ್ದಾರೆ. ಈ ವಿಪರ್ಯಾಸಕ್ಕೆ ಅಂತ್ಯ ಹಾಕಬೇಕಿದೆ ಎಂದು ಭವ್ಯಾ ನರಸಿಂಹ ಮೂರ್ತಿ ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಮಾಡಿದ 173 ಭಾಷಣಗಳ ಪೈಕಿ 110 ಭಾಷಣಗಳು ದ್ವೇಷದಿಂದ ಕೂಡಿತ್ತು ಎಂದು ಅಮೇರಿಕಾದ ಖಾಸಗಿ ಸಂಸ್ಥೆಯೊಂದರ ವರದಿ ತಿಳಿಸಿದೆ. ಆದರೆ ದೇಶದ ಚುನಾವಣಾ ಆಯೋಗವು ಇದರ ವಿರುದ್ಧ ಕ್ರಮಕೈಗೊಳ್ಳಲೇ ಇಲ್ಲ. ಐಟಿ, ಈಡಿ ಮೂಲಕ ಬಿಜೆಪಿಯೇತರ ರಾಜ್ಯ ಸರಕಾರ ಗಳನ್ನು ಅಸ್ಥಿರಗೊಳಿಸಿದಾಗಲೂ ಚುನಾವಣಾ ಆಯೋಗವು ಮೌನಕ್ಕೆ ಶರಣಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಂವಿಧಾನವನ್ನು ಬುಡಮೇಲು ಮಾಡುವ ಈ ದ್ವೇಷ ರಾಜಕಾರಣದ ವಿರುದ್ಧ ಸಾಹಿತಿಗಳು, ಪತ್ರಕರ್ತರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು. ಜನರೂ ಕೂಡ ಸುಶಿಕ್ಷಿತರಾಗಬೇಕು, ಎಚ್ಚೆತ್ತುಕೊಳ್ಳಬೇಕು. ಸಮಾನ ಮನಸ್ಕರು ಸೇರಿ ಪ್ರಜಾಪ್ರಭುತ್ವ ವನ್ನು ಗಟ್ಟಿಗೊಳಿಸುವ ಮೂಲಕ ದ್ವೇಷದ ರಾಜಕಾರಣಕ್ಕೆ ಸೋಲುಣಿಸಬೇಕು ಎಂದು ಭವ್ಯಾ ನರಸಿಂಹ ಮೂರ್ತಿ ಕರೆ ನೀಡಿದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News