ಮಂಗಳೂರು: ರೌಡಿಶೀಟರ್ ಆಕಾಶಭವನ ಶರಣ್‌ಗೆ ಆಶ್ರಯ ನೀಡಿದ ಆರೋಪ; ಏಳು ಮಂದಿಯ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ಪೊಲೀಸರ ಗುಂಡೇಟಿನಿಂದ ಕಾಲಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿಶೀಟರ್ ರೋಹಿದಾಸ್ ಯಾನೆ ಆಕಾಶಭವನ ಶರಣ್ (37)ಗೆ ಆಶ್ರಯ ನೀಡಿದ 7 ಮಂದಿಯ ವಿರುದ್ಧ ವಿವಿಧ ಠಾಣೆಗಳಲ್ಲಿ 5 ಪ್ರಕರಣ ದಾಖಲಿಸಲಾಗಿದೆ.
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆಕಾಶಭವನ ಶರಣ್ ಪತ್ತೆಗೆ ಸಿಸಿಬಿ ಪೊಲೀಸರು 20 ದಿನಗಳಿಂದ ಕಾರ್ಯಾಚರಣೆ ನಡೆಸಿದ ವೇಳೆ ಆತ ತಲೆಮರೆಸಿಕೊಳ್ಳಲು ವಿವಿಧ ಕಡೆ ಹಲವರು ಸಹಾಯ ಮಾಡಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆಶ್ರಯ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕೋಡಿಕಲ್‌ನ ಶೀಲಾ, ಉಡುಪಿ ಸಂತೆಕಟ್ಟೆಯ ಶರತ್ ಭಂಡಾರಿ ಹಾಗೂ ಆತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಹಾಗೂ ಚೇತನ್ ಬುಳ್ಳ ಎಂಬವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ, ಶಿವ ಕರ್ಬಿಸ್ಥಾನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆ, ಶಾನು ಶೆಟ್ಟಿ ಎಂಬಾತನ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಶರಣ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಂಡ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗೆ ಕಸ್ಟಡಿಗೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.