ಮಂಗಳೂರು| ಅಮಲು ಪದಾರ್ಥ ಸೇವಿಸಿ ವಾಹನ ಚಲಾವಣೆ; 25 ಮಂದಿಯ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಜ.1: ಹೊಸ ವರ್ಷಾಚರಣೆ ಸಂದರ್ಭ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸಿದ ಆರೋಪದ ಮೇರೆಗೆ 25 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಂಗಳವಾರ ರಾತ್ರಿ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಹಮ್ಮಿಕೊಂಡ ವಿಶೇಷ ಕಾರ್ಯಾಚರಣೆಯಲ್ಲಿ 553 ವಾಹನಗಳನ್ನು ತಪಾಸಣೆ ನಡೆಸಿ ಅಮಲು ಪದಾರ್ಥ ಸೇವನೆಗೈದು ವಾಹನ ಚಾಲನೆ ಮಾಡಿದ 25 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಚಾರ ಪೂರ್ವ ಠಾಣೆಯ ನಂತೂರು ವೃತ್ತದಲ್ಲಿ 90 ವಾಹನ ತಪಾಸಣೆ ನಡೆಸಲಾಗಿದ್ದು, ಅಮಲು ಪದಾರ್ಥ ಸೇವನೆ ಮಾಡಿ ವಾಹನ ಚಲಾಯಿಸಿದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಂಚಾರ ಪಶ್ಚಿಮ ಠಾಣೆ ವ್ಯಾಪ್ತಿಯ ಕೊಟ್ಟಾರ ಚೌಕಿಯಲ್ಲಿ 40 ವಾಹನ ತಪಾಸಣೆ ನಡೆಸಿ 1 ಪ್ರಕರಣ, ಕುಂಟಿಕಾನ ಜಂಕ್ಷನ್ ನಲ್ಲಿ 98 ವಾಹನ ತಪಾಸಣೆ ನಡೆಸಿ 4 ಪ್ರಕರಣ, ಸಂಚಾರ ಉತ್ತರ ಠಾಣಾ ವ್ಯಾಪ್ತಿಯ ಬೈಕಂಪಾಡಿ ಜಂಕ್ಷನ್ 60 ವಾಹನ ತಪಾಸಣೆ ನಡೆಸಿ 5 ಪ್ರಕರಣ, ಕೂಳೂರು ಅಯ್ಯಪ್ಪ ಗುಡಿ ಬಳಿ 60 ವಾಹನ ತಪಾಸಣೆ ನಡೆಸಿ 1 ಪ್ರಕರಣ, ರೆಡ್ ರಾಕ್ ಮುಕ್ಕ 110 ವಾಹನಗಳ ತಪಾಸಣೆ ನಡೆಸಿ 5 ಪ್ರಕರಣ, ಸಂಚಾರ ದಕ್ಷಿಣ ಠಾಣಾ ವ್ಯಾಪ್ತಿಯ ಪಂಪ್‌ವೆಲ್ ಜಂಕ್ಷನ್ ನಲ್ಲಿ 50 ವಾಹನಗಳ ತಪಾಸಣೆ ನಡೆಸಿ 3 ಪ್ರಕರಣ, ಪಡೀಲ್ ಜಂಕ್ಷನ್‌ನಲ್ಲಿ 45 ವಾಹನಗಳ ತಪಾಸಣೆ ನಡೆಸಿ 3 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.