ವಿಟ್ಲ ನಕಲಿ ಈಡಿ ದಾಳಿ: ಎಫ್‌ಐಆರ್ ನಲ್ಲಿ ಏನಿದೆ?
ವಿಟ್ಲ: ಬಂಟ್ವಾಳ ತಾಲೂಕಿನ ನಾರ್ಶದಲ್ಲಿ ಉದ್ಯಮಿಯೊಬ್ಬರ ಮನೆಗೆ ದಾಳಿ ನಡೆಸಿರುವ ನಕಲಿ ಈಡಿ ಅಧಿಕಾರಿಗಳು, “ಸೂಕ್ತ ದಾಖಲೆಗಳನ್ನು ನೀಡಿ, ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳಿ” ಎಂದು ತಿಳಿಸಿ ಸುಮಾರು 25 ರಿಂದ 30 ಲಕ್ಷವನ್ನು ದೋಚಿದ್ದಾರೆ ಎಂದು ಉದ್ಯಮಿಯ ಪುತ್ರ ಮಹಮ್ಮದ್ ಇಕ್ಬಾಲ್ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ.
ಶುಕ್ರವಾರ ರಾತ್ರಿ 8:10 ರ ಸುಮಾರಿಗೆ ತಮಿಳುನಾಡಿನ ನೋಂದಣಿ ಹೊಂದಿರುವ ವಾಹನದಲ್ಲಿ ಮನೆಗೆ ಬಂದಿರುವ ವಂಚಕರು, ತಮ್ಮನ್ನು ಈಡಿ ಅಧಿಕಾರಿಗಳು ಎಂದು ಪರಿಚಯಿಸಿ, ಮನೆಯವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದರು ಎಂದು ಇಕ್ಬಾಲ್ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಎಫ್‌ಐಆರ್ ನಲ್ಲೇನಿದೆ?
ವಿಟ್ಲ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, “ಶುಕ್ರವಾರ ರಾತ್ರಿ 8:10 ರ ಸುಮಾರಿಗೆ ತಮಿಳುನಾಡಿನ ನೋಂದಣಿ ಹೊಂದಿರುವ ವಾಹನದಲ್ಲಿ ದೂರುದಾರರ ಮನೆಗೆ ಬಂದಿರುವ ವಂಚಕರು, ತಮ್ಮನ್ನು ಈಡಿ ಅಧಿಕಾರಿಗಳು ಎಂದು ಪರಿಚಯಿಸಿ, ಮನೆಯವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ” ಎಂದು ತಿಳಿದು ಬಂದಿದೆ.
6 ಮಂದಿಯ ವಂಚಕರ ತಂಡವು, ಮನೆಯವರ ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದು, ಬಳಿಕ ಮನೆಯನ್ನೆಲ್ಲಾ ತಡಕಾಡಿದ್ದು, ಮನೆ ಪರಿಶೀಲನೆಗೆ ನಮಗೆ ಆದೇಶವಾಗಿದೆ ಎಂದು ದೂರುದಾರರ ಕುಟುಂಬವನ್ನು ನಂಬಿಸಿದ್ದಾರೆ. ಈ ವೇಳೆ, ಉದ್ಯಮಿಯ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ಹಣವನ್ನು ವಶಕ್ಕೆ ಪಡೆದ ವಂಚಕರು, ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡಿ, ಕಸ್ಟಡಿಗೆ ತೆಗೆದುಕೊಳ್ಳುವುದಾಗಿಯೂ ಹೆದರಿಸಿದ್ದಾಗಿ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
“ರಾತ್ರಿ ಸುಮಾರು 10.30 ಗಂಟೆಗೆ ಆರೋಪಿಗಳು ಮನೆಯಿಂದ ನಿರ್ಗಮಿಸಿದ್ದು, ಈ ವೇಳೆ ಅವರು ಪಡೆದುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ” ಎಂದು ದೂರು ಬಂದಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಈ ಬಗ್ಗೆ ದೂರುದಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಈಡಿ ಅಧಿಕಾರಿಗಳಂತೆ ನಟಿಸಿ ಮನೆಯಿಂದ ಸುಮಾರು 25 ರಿಂದ 30 ಲಕ್ಷ ಹಣವನ್ನು ಮತ್ತು 5 ಮೊಬೈಲ್ ಫೋನ್‌ಗಳನ್ನು ಪಡೆದುಕೊಂಡು ವಂಚನೆ ಮಾಡಿರುವುದು ತಿಳಿದು ಬಂದಿದೆ ಎಂದು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 02/2025 ಕಲಂ: 319(2), 318(4) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸದ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್, ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ, ಆರೋಪಿಗಳ ಪತ್ತೆಗಾಗಿ ಸೂಕ್ತ ಸಲಹೆ/ಸೂಚನೆ ನೀಡಿದರು.